ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಮೇಘಸ್ಪೋಟ
ಪಿಟಿಐ ಚಿತ್ರ
ಗೋಪೇಶ್ವರ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಿಂದಾಗಿ ಮೃತಪಟ್ಟ ಐವರ ಮೃತದೇಹಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಎರಡು ಮೃತದೇಹಗಳನ್ನು ರಕ್ಷಣಾ ತಂಡಗಳು ನಿನ್ನೆ (ಗುರುವಾರ) ಹೊರತೆಗೆದಿದ್ದವು.
ಚಮೋಲಿ ಜಿಲ್ಲೆಯ ನಾಲ್ಕು ಹಳ್ಳಿಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಭೂಕುಸಿತ ಸಂಭವಿಸಿದ್ದು, 30ಕ್ಕೂ ಅಧಿಕ ಮನೆಗಳು ಉರುಳಿವೆ. ಹಲವಾರು ಮಂದಿ ನಾಪತ್ತೆಯಾಗಿದ್ದು, ಅವರು ಮಣ್ಣಿನಡಿ ಸಿಲುಕಿರುವ ಸಂಶಯ ವ್ಯಕ್ತವಾಗಿದೆ. ಇನ್ನೂ 20 ಮಂದಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಗುರುವಾರ, ಕುಂತರಿ ಲಗಾಫಾಲಿ ಮತ್ತು ಧುರ್ಮಾ ಗ್ರಾಮಗಳಿಂದ ರಕ್ಷಿಸಲ್ಪಟ್ಟ ಅನೇಕ ಮಂದಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರು ಋಷಿಕೇಶದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅವರಿಗೆ ಶಿಬಿರಗಳಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ.ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದರು.
ಈ ನಾಲ್ಕು ಹಳ್ಳಿಗಳು ನಂದನಗರ ಪ್ರದೇಶದಲ್ಲಿ ಬರುತ್ತಿದ್ದು, ಡೆಹ್ರಾಡೂನ್‌ನಿಂದ 260 ಕಿ.ಮೀ ಮತ್ತು ಚಮೋಲಿಯಿಂದ 50 ಕಿ.ಮೀ ದೂರದಲ್ಲಿವೆ. ನಂದನಗರ ಪ್ರದೇಶದಲ್ಲಿ ಭೂಕುಸಿತವು ಈಗಾಗಲೇ ಭಾರಿ ಅವಾಂತರ ಸೃಷ್ಟಿಸಿದೆ.
ಕುಂತರಿ ಲಗಾಫಾಲಿ, ಕುಂತರಿ ಲಗಾಸರ್ಪಾನಿ, ಸೆರಾ ಮತ್ತು ಧುರ್ಮಾ ಗ್ರಾಮಗಳಲ್ಲಿ ದುರ್ಘಟನೆ ಸಂಭವಿಸಿದೆ ಎಂದು ಧಾಮಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.