ರಾಹುಲ್ ಗಾಂಧಿ
–ಪಿಟಿಐ ಚಿತ್ರ
ಪುಣೆ: ಹಿಂದುತ್ವ ಪ್ರತಿಪಾದಕ ವಿ.ಡಿ. ಸಾವರ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉದ್ದೇಶಪೂರ್ವಕವಾಗಿಯೇ ಗೈರಾಗುತ್ತಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರರಿಂದ ಪಡೆದ ಮಾಹಿತಿಯನ್ನು ನಮ್ಮ ಕಕ್ಷಿದಾರರು ಇನ್ನೂ ಪರಿಶೀಲಿಸಿಲ್ಲ ಎಂದು ಹೇಳಿ, ವಿಚಾರಣೆಯನ್ನು ಮುಂದೂಡುವಂತೆ ಕೋರಿದ್ದರು. ಇದಾದ ಬಳಿಕ ಸಾತ್ಯಕಿ ಸಾವರ್ಕರ್ ಪರ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮೇ 28ಕ್ಕೆ ಮುಂದೂಡಿದೆ. ಇದೇ ಪ್ರಕರಣ ಸಂಬಂಧ ನ್ಯಾಯಾಲಯವು ಈಗಾಗಲೇ ರಾಹುಲ್ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ನೀಡಿದೆ.
ರಾಹುಲ್ ಗಾಂಧಿ ಅವರು 2023ರ ಮಾರ್ಚ್‌ನಲ್ಲಿ, ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ, ವಿ.ಡಿ. ಸಾವರ್ಕರ್ ಅವರು ತಮ್ಮ ಐದಾರು ಸ್ನೇಹಿತರೊಂದಿಗೆ ಸೇರಿಕೊಂಡು ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಖುಷಿಪಟ್ಟಿದ್ದಾಗಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆಂದು ಹೇಳಿದ್ದಾರೆ. ಆದರೆ, ಅಂತಹ ಯಾವುದೇ ಘಟನೆ ನಡೆದಿಲ್ಲ ಮತ್ತು ವಿ.ಡಿ. ಸಾವರ್ಕರ್ ಅವರು ಎಲ್ಲಿಯೂ ಆ ರೀತಿ ಬರೆದಿಲ್ಲ. ರಾಹುಲ್ ಗಾಂಧಿಯವರ ಈ ಆರೋಪ ದುರುದ್ದೇಶಪೂರಿತವಾಗಿದೆ ಎಂದು ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ರಾಹುಲ್ ಗಾಂಧಿ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.