ADVERTISEMENT

ಕೊನೆಯ ಹಂತದ ಮತದಾನ: ಕೈ ಕೊಟ್ಟ ಇವಿಎಂ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

​ಪ್ರಜಾವಾಣಿ ವಾರ್ತೆ
Published 19 ಮೇ 2019, 11:18 IST
Last Updated 19 ಮೇ 2019, 11:18 IST
   

ಕೋಲ್ಕತ್ತ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನದ ವೇಳೆ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಇಲ್ಲಿನ 9 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು ಬರಾಸತ್ ಮತ್ತು ಮಾಥುರಾಪುರ್ ಲೋಕಸಭಾ ಕ್ಷೇತ್ರದಲ್ಲಿ ಕಿಡಿಗೇಡಿಗಳು ಕಚ್ಚಾ ಬಾಂಬ್ ಎಸೆದು ದಾಂಧಲೆ ನಡೆಸಿರುವ ಘಟನೆ ವರದಿಯಾಗಿದೆ.

ಜಯನಗರ್ ಲೋಕಸಭಾ ಕ್ಷೇತ್ರದ ಕುಲ್ತೋಲಿಎಂಬಲ್ಲಿ ಟಿಎಂಸಿ ಕಾರ್ಯಕರ್ತರು ಬಿಜೆಪಿ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲವಾರು ಪ್ರದೇಶಗಳಲ್ಲಿ ಕಚ್ಚಾಟ ನಡೆದಿದ್ದು, ಪೊಲೀಸರು ಮೂಕಪ್ರೇಕ್ಷಕರಾಗಿ ನಿಂತಿದ್ದರು ಎಂದು ಬಸೀರ್‌ಹತ್ ಲೋಕಸಭಾ ಕ್ಷೇತ್ರದಬಿಜೆಪಿ ಅಭ್ಯರ್ಥಿ ಸತ್ಯನ್ ಬಸು ದೂರಿದ್ದಾರೆ.

ಮತದಾನ ಮಾಡಲು ಜನರು ಬೆಳಗ್ಗೆ 4.30ಕ್ಕೆ ಸಾಲಿನಲ್ಲಿ ನಿಂತಿದ್ದರು. ಇಲ್ಲಿನ ಸಂದೇಶ್‌ಖಲಿ, ಹಿಂಗಾಲ್‌ಗಂಜ್ ಮತ್ತು ಬದುರಿಯಾದಲ್ಲಿಜಗಳ ನಡೆದಿದೆ. ಈ ಘಟನೆ ನಡೆಯುತ್ತಿದ್ದಾಗ ಶಶಾನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇನ್‌ಚಾರ್ಜ್ ಟಿಎಂಸಿಯವರ ಜಗಳಕ್ಕೆ ಸಹಾಯ ಮಾಡುತ್ತಿದ್ದರು ಎಂದಿದ್ದಾರೆ ಬಸು.

ADVERTISEMENT

ಮತದಾನದ ಮೊದಲ ಮೂರು ಗಂಟೆಗಳಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಚುನಾವಣಾ ಆಯೋಗ ಸುಮಾರು 150 ಪ್ರಕರಣಗಳನ್ನುದಾಖಲಿಸಿದೆ. ಆದರೆ ಇದರ ಬಗ್ಗೆ ತಕ್ಕ ಕ್ರಮಗಳನ್ನು ಆಯೋಗ ಕೈಗೊಂಡಿಲ್ಲ ಎಂದು ಬಂಗಾಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಬಸು ಆರೋಪಿಸಿದ್ದಾರೆ.

ಕೋಲ್ಕತ್ತ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿರುವ ಮುದಿಯಾಲಿ ಮತದಾನ ಕೇಂದ್ರದ ಮತಗಟ್ಟೆ ಸಂಖ್ಯೆ 72ಕ್ಕೆ ಪ್ರವೇಶಿಸಲು ಅಲ್ಲಿದ್ದ ಸಿಆರ್‌ಪಿಎಫ್ ಸಿಬ್ಬಂದಿ ಅನುಮತಿಸಿಲ್ಲ ಎಂದು ಟಿಎಂಸಿ ಅಭ್ಯರ್ಥಿ ಮಾಲಾ ರಾಯ್ ಆರೋಪಿಸಿದ್ದಾರೆ. ಮತದಾನ ಪ್ರಕ್ರಿಯೆ 45 ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ಇದಕ್ಕೆ ಕಾರಣ ಏನು ಎಂದು ವಿಚಾರಿಸಲು ನಾನು ಅಲ್ಲಿಗೆ ಹೋಗಿದ್ದೆ ಎಂದಿದ್ದಾರೆ ರಾಯ್. ತಮಗೆ ಮತಗಟ್ಟೆಗೆ ಅನುಮತಿ ನಿರಾಕರಿಸಿದ್ದಕ್ಕೆ ರಾಯ್ ದೂರು ನೀಡಿದ್ದಾರೆ.

ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಇವಿಎಂ ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರೇ ಆರೋಪಿಸಿದ್ದು, ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾದಾಗ ನೂರರಷ್ಟು ಇವಿಎಂಗಳು ಕಾರ್ಯ ನಿರ್ವಹಿಸಿಲ್ಲ ಎಂದ ರೇ ಅವರು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಹೊಸತಾಗಿ 16 ಲಕ್ಷ ಇವಿಎಂಗಳನ್ನುಖರೀದಿಸಲುಏಪ್ರಿಲ್ 2017ರಂದು ಸರ್ಕಾರ ₹3,173 ಕೋಟಿ ಜಾರಿ ಮಾಡಿತ್ತು.ಮತದಾನ ಪ್ರಕ್ರಿಯೆಯನ್ನು ನಿಧಾನಗೊಳಿಸುವ ಸಲುವಾಗಿ 9 ಲೋಕಸಭಾ ಕ್ಷೇತ್ರಗಳಲ್ಲಿ ಹಳೆಯ ಮತ್ತು ಕಳಪೆ ಮತಯಂತ್ರಗಳನ್ನು ನೀಡಲಾಗಿದೆಯೇ ಎಂದು ರೇ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.