ADVERTISEMENT

ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್‌ ಸ್ಲೀಪರ್‌ ರೈಲು

ಪಿಟಿಐ
Published 31 ಡಿಸೆಂಬರ್ 2025, 4:39 IST
Last Updated 31 ಡಿಸೆಂಬರ್ 2025, 4:39 IST
<div class="paragraphs"><p>ವಂದೇ ಭಾರತ್ ಸ್ಲೀಪರ್ ರೈಲು</p></div>

ವಂದೇ ಭಾರತ್ ಸ್ಲೀಪರ್ ರೈಲು

   

ನವದೆಹಲಿ: ಸ್ವದೇಶಿ ವಿನ್ಯಾಸದ ವಂದೇ ಭಾರತ್‌ ಸ್ಲೀಪರ್‌ ರೈಲಿನ ಅಂತಿಮ ಸುತ್ತಿನ ‘ಗರಿಷ್ಠ ವೇಗ’ ಪರೀಕ್ಷೆ ಯಶಸ್ವಿಯಾಗಿದ್ದು, ಸುಧಾರಿತ ತಂತ್ರಜ್ಞಾನ, ಸುರಕ್ಷತೆಯಲ್ಲಿ ಭಾರತೀಯ ರೈಲ್ವೆ ಹೊಸ ಮೈಲಿಗಲ್ಲು ಸ್ಥಾಪಿಸಿದೆ.  

ರೈಲ್ವೆ ಸುರಕ್ಷತಾ ಆಯುಕ್ತರ (ಸಿಆರ್‌ಎಸ್‌) ಮೇಲ್ವಿಚಾರಣೆಯಲ್ಲಿ, ರಾಜಸ್ಥಾನದ ಕೋಟಾ– ಮಧ್ಯಪ್ರದೇಶದ ನಾಗ್ಡಾ ವಲಯದಲ್ಲಿ 16 ಕೋಚ್‌ಗಳಿದ್ದ ವಂದೇ ಭಾರತ್‌ ಸ್ಲೀಪರ್‌ ರೈಲಿನ ಗರಿಷ್ಠ  ವೇಗವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ADVERTISEMENT

‘ರೈಲು ಗಂಟೆಗೆ ಗರಿಷ್ಠ 180 ಕಿ.ಮೀ ವೇಗದಲ್ಲಿ ಚಲಿಸಿದೆ, ಸುರಕ್ಷತಾ ಅಂಶಗಳು ಸಂಪೂರ್ಣ ತೃಪ್ತಿದಾಯಕವಾಗಿದೆ’ ಎಂದು ರೈಲ್ವೆ ಸಚಿವಾಲಯದ ಪ್ರಕಟಣೆ ತಿಳಿಸಿದೆ.  

ದಿನ ನಿಗದಿಯಾಗಿಲ್ಲ: ವಂದೇ ಭಾರತ್‌ ಸ್ಲೀಪರ್‌ ರೈಲು ಎಂದಿನಿಂದ ಕಾರ್ಯಾಚರಣೆ ಆರಂಭಿಸಲಿದೆ ಎನ್ನುವುದನ್ನು ರೈಲ್ವೆ ಸಚಿವಾಲಯ ಇನ್ನೂ  ಸ್ಪಷ್ಟಪಡಿಸಿಲ್ಲ. ಈಗಾಗಲೇ ಹಲವು ಬಾರಿ  ಉದ್ಘಾಟನೆಯನ್ನು ಮುಂದೂಡಲಾಗಿದೆ. ಡಿಸೆಂಬರ್‌ 2025ರ ಒಳಗಾಗಿ ವಂದೇ ಭಾರತ್‌ ಸ್ಲೀಪರ್‌ ಕಾರ್ಯಾರಂಭ ಮಾಡಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಈ ಹಿಂದೆ ಹೇಳಿದ್ದರು. 

‘ರೈಲಿನ ವೇಗ ಮತ್ತು ಸುರಕ್ಷತಾ ಪರೀಕ್ಷೆಯ ವಿಡಿಯೊವನ್ನು ಅಶ್ವಿನಿ ವೈಷ್ಣವ್‌ ಬುಧವಾರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದರಲ್ಲಿ ರೈಲಿನ ಗಾಜಿನ ಗುಣಮಟ್ಟ ಮತ್ತು ಸ್ಥಿರತೆಯನ್ನು ಪರೀಕ್ಷಿಸುತ್ತಿರುವ ದೃಶ್ಯವಿದೆ. ‘ರೈಲು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವಾಗಲೂ, ರೈಲಿನ ಗಾಜಿನ ಮೇಲಿರುವ ನೀರ ಹನಿಗಳು ಕದಲದಿರುವ ದೃಶ್ಯವನ್ನು ಕಾಣಬಹುದು. ‘ಇದು ಹೊಸ ತಲೆಮಾರಿನ ಅತ್ಯಾಧುನಿಕ ತಂತ್ರಜ್ಞಾನದ ರೈಲು’ ಎಂದು ವೈಷ್ಣವ್‌ ಬಣ್ಣಿಸಿದ್ದಾರೆ. 

ವಂದೇ ಭಾರತ್‌ ಸ್ಲೀಪರ್‌ ರೈಲಿನ ಗರಿಷ್ಠ ವೇಗ ಪರೀಕ್ಷೆ ಯಶಸ್ವಿಯಾಗಿದ್ದು ಸುರಕ್ಷತಾ ಅಂಶಗಳು ಸಂಪೂರ್ಣ ತೃಪ್ತಿದಾಯಕವಾಗಿದೆ ಎಂದು ’ಸಿಆರ್‌ಎಸ್‌’ ಘೋಷಿಸಿದೆ 
– ಅಶ್ವಿನಿ ವೈಷ್ಣವ್‌ ರೈಲ್ವೆ ಸಚಿವ 
ಯಾವೆಲ್ಲ ಪರೀಕ್ಷೆ? 
ರೈಲು ಗರಿಷ್ಠ ವೇಗ ತಲುಪಿದಾಗ ಹೊಯ್ದಾಡುವಿಕೆ ಚಾಲನಾ ಸ್ಥಿರತೆ ಕಂಪನ ಬ್ರೇಕಿಂಗ್‌ ಕಾರ್ಯಕ್ಷಮತೆ ಸುರಕ್ಷತಾ ಅಂಶಗಳು ಮತ್ತು ಇತರೆ  ಕ್ಲಿಷ್ಟಕರ ವಿಷಯಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.   ಏನೆಲ್ಲ ಇರಲಿದೆ? ಸುಧಾರಿತ ಸಸ್ಪೆನ್ಷನ್ ವ್ಯವಸ್ಥೆ ಸ್ವಯಂ ಚಾಲಿತ ಬಾಗಿಲು ಅತ್ಯಾಧುನಿಕ ಶೌಚಾಲಯ ಅಗ್ನಿ ಆಕಸ್ಮಿಕ ಮತ್ತು ಸುರಕ್ಷತಾ ನಿಗಾ ವ್ಯವಸ್ಥೆ ಸಿಸಿಟಿವಿ ಆಧಾರಿತ ನಿಗಾ ವ್ಯವಸ್ಥೆ ಪ್ರಯಾಣಿಕರ ಡಿಜಿಟಲ್‌ ಮಾಹಿತಿ ವ್ಯವಸ್ಥೆ ಕಡಿಮೆ ಇಂಧನ ಬಳಕೆ ಸೇರಿದಂತೆ ಹಲವು ಸುಧಾರಿತ ತಂತ್ರಜ್ಞಾನ ಒಳಗೊಂಡ  ಆತ್ಮನಿರ್ಭರ ಭಾರತದ ಸಂಕೇತವಾಗಿರುವ  ವಂದೇ ಭಾರತ್‌ ಸ್ಲೀಪರ್‌ ರೈಲು ಪ್ರಯಾಣಿಕರಿಗೆ ಸುರಕ್ಷಿತ ಮತ್ತು ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ಖಾತ್ರಿಪಡಿಸುತ್ತದೆ ಎಂದು ಭಾರತೀಯ ರೈಲ್ವೆ ಹೇಳಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.