ಮಹಾದೇವಿ
ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲ್ಲೂಕಿನ ನಾಂದಣಿ ಜೈನ ಮಂದಿರವೊಂದರಲ್ಲಿ ಸಾಕಾನೆಯಾಗಿದ್ದ ಮಹಾದೇವಿ (ಮಾಧುರಿ) ಆನೆಯನ್ನು ನಾವಾಗಲೇ ವನತಾರಾ (Vantara) ಮೃಗಾಲಯಕ್ಕೆ ತರಿಸಿಕೊಂಡಿಲ್ಲ. ಕೋರಿಕೆ ಮೇರೆಗೆ ಆ ಕಾರ್ಯವನ್ನು ನಾವು ನೆರವೇರಿಸಿದ್ದೇವೆ ಎಂದು ವಂತಾರಾ ಪ್ರಕಟಣೆ ಹೇಳಿದೆ.
30 ವರ್ಷದ ಮಹಾದೇವಿ ಆನೆಯನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಅದರ ಕಾಳಜಿ ಸರಿಯಾಗಿ ನಡೆಯುತ್ತಿಲ್ಲ, ಸರಪಳಿ ಹಾಕಿ ಹಿಂಸೆ ನೀಡಲಾಗುತ್ತಿದೆ ಎಂದು ಪ್ರಾಣಿ ದಯಾ ಸಂಘಟನೆ ‘ಪೆಟಾ’ ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು. ಮನವಿ ಪುರಸ್ಕರಿಸಿದ್ದ ಬಾಂಬೆ ಹೈಕೋರ್ಟ್ ಜುಲೈ 16 ರಂದು ಮಹಾದೇವಿಯ ಆರೈಕೆಗಾಗಿ ಕ್ರಮ ವಹಿಸುವಂತೆ ಹಾಗೂ ಆನೆಯನ್ನು ಮೃಗಾಲಯಕ್ಕೆ ಸ್ಥಳಾಂತರಿಸಬೇಕು ಎಂದು ಆದೇಶ ನೀಡಿತ್ತು.
ಈ ಆದೇಶದ ಅನ್ವಯ ಪೆಟಾ ಸಮಕ್ಷಮದಿಂದ ಮಹಾದೇವಿ ಆನೆ ವಂತಾರಾ ಸೇರಿದೆ. ಇದರಲ್ಲಿ ನಮ್ಮ ಹಸ್ತಕ್ಷೇಪ ಇಲ್ಲ ಎಂದು ವನತಾರಾ ಹೇಳಿದೆ.
ಮಹಾದೇವಿ ಆನೆಯನ್ನು ಕೊಲ್ಹಾಪುರದಿಂದ ಸ್ಥಳಾಂತರಿಸಬಾರದು. ಎಲ್ಲವೂ ಅಂಬಾನಿಗೆ ಸೇರಿದ್ದಲ್ಲ ಎಂದು ಹಲವರು ಕೆಲ ದಿನಗಳಿಂದ ಕೊಲ್ಹಾಪುರ ಹಾಗೂ ಸುತ್ತಮುತ್ತ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಂತಾರಾ ಸ್ಪಷ್ಟನೆ ನೀಡಿದೆ.
‘ಕೇಂದ್ರ ಸರ್ಕಾರ ಅನ್ಯಾಯವಾಗಿ ಜೈನ ಮಠಗಳಲ್ಲಿರುವ ಆನೆಗಳನ್ನು ಉದ್ದಿಮೆ ಅಂಬಾನಿ ಅವರಿಗೆ ಒಪ್ಪಿಸುವ ಹನ್ನಾರ ಮಾಡುತ್ತಿದೆ. ಕಳೆದ ಅನೇಕ ವರ್ಷಗಳಿಂದ ಪರಂಪರೆಯಾಗಿ ಜೈನ ಮಠಗಳಲ್ಲಿ ಆನೆಗಳನ್ನು ಸಾಕಲಾಗುತ್ತಿದೆ. ಇವುಗಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಾತ್ರ ಬಳಸಲಾಗುತ್ತದೆ’ ಎಂದು ಸ್ಥಳಾಂತರ ವಿರೋಧಿಸುವವರ ವಾದವಾಗಿತ್ತು.
ಪ್ರಾಣಿ, ಪಕ್ಷಿಗಳ ರಕ್ಷಣೆ, ಆರೈಕೆ ಮತ್ತು ಪುನರ್ವಸತಿಗಾಗಿ ರಿಲಯನ್ಸ್ ಫೌಂಡೇಶನ್ ವನತಾರಾ ಎಂಬ ವನ್ಯಜೀವಿ ಸಂರಕ್ಷಣೆ ಕೇಂದ್ರ ಸ್ಥಾಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.