ADVERTISEMENT

ರೈಲ್ವೆ ಪ್ರಯಾಣ ದರ: ಹಿರಿಯ ನಾಗರಿಕರಿಗೆ ರಿಯಾಯಿತಿ ರದ್ದು: ವರುಣ್‌ ಗಾಂಧಿ ಆಕ್ರೋಶ

ಪಿಟಿಐ
Published 22 ಜುಲೈ 2022, 12:44 IST
Last Updated 22 ಜುಲೈ 2022, 12:44 IST
ವರುಣ್‌ ಗಾಂಧಿ
ವರುಣ್‌ ಗಾಂಧಿ   

ನವದೆಹಲಿ: ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣ ದರಗಳಲ್ಲಿ ನೀಡಿರುವ ರಿಯಾಯಿತಿಯನ್ನು ರದ್ದು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್‌ ಗಾಂಧಿ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ವಿಮಾನಗಳ ತುರ್ತು ಭೂಸ್ಪರ್ಶದ ಪ್ರಕರಣಗಳು ದೇಶದಲ್ಲಿ ಪದೇ ಪದೇ ನಡೆಯುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ವರುಣ್‌, ’ರೈಲುಗಳ ಪ್ರಯಾಣ ದರಗಳಲ್ಲಿ ಸಂಸದರಿಗೆ ರಿಯಾಯಿತಿ ಮುಂದುವರಿದಿದೆ. ಆದರೆ, ಹಿರಿಯ ನಾಗರಿಕರಿಗೆ ನೀಡಿರುವ ರಿಯಾಯಿತಿಯನ್ನು ಕೇಂದ್ರವು ‘ಹೊರೆ’ ಎಂದು ಯಾಕೆ ಪರಿಗಣಿಸಿದೆ’ ಎಂದು ಅವರು ಪ್ರಶ್ನಿಸಿದ್ದಾರೆ.

ರೈಲ್ವೆ ಸಚಿವಾಲಯದ ಈ ನಿರ್ಧಾರವು ದುರದೃಷ್ಟಕರ. ಈ ಕುರಿತು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಜೀವನದ ಸಂಧ್ಯಾಕಾಲದಲ್ಲಿರುವವರ ಕುರಿತು ಇಂಥ ನಿರ್ಧಾರ ತೆಗೆದುಕೊಳ್ಳುವುದು ಸಂವೇದನಾರಹಿತ’ ಎಂದಿದ್ದಾರೆ.

‘ದೇಶೀಯ ವಿಮಾನಗಳ ದರವನ್ನು ದ್ವಿಗುಣ ಮಾಡಲಾಗಿದೆ. ಆದರೆ, ವಿಮಾನಗಳ ತುರ್ತು ಭೂಸ್ಪರ್ಶ ಪ್ರಕರಣಗಳು ಹೆಚ್ಚಾಗಿವೆ. ಯಾವುದಾದರೂ ‘ದೊಡ್ಡ ಘಟನೆ’ ಸಂಭವಿಸಲಿ ಎಂದು ಕೇಂದ್ರ ಕಾಯುತ್ತಿರುವಂತಿದೆ ಎಂದು ವರಣ್‌ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಾಗರಿಕ ವಿಮಾನಯಾನ ಮಹಾನಿರ್ದೆಶನಾಲಯವು (ಡಿಜಿಸಿಎ) ಈ ಕುರಿತು ಗಂಭೀರವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.

ಪ್ರಯಾಣಿಕರಿಗೆ ದರಗಳಲ್ಲಿ ರಿಯಾಯಿತಿ ನೀಡುವುದು ‘ಭಾರಿ ಹೊರೆ’ಯಾಗಿದೆ ಎಂದು ರೈಲ್ವೆ ಸಚಿವಾಲಯವು ಲೋಕಸಭೆಗೆ ತಿಳಿಸಿತ್ತು. ಪ್ರಯಾಣಿಕರಿಗೆ ರಿಯಾಯಿತಿ ನೀಡುವುದಿಲ್ಲ ಎಂದೂ ಹೇಳಿತ್ತು.

‘ಪ್ರಯಾಣಿಕರಿಗೆ ಕಡಿಮೆ ದರಗಳಲ್ಲಿ ಟಿಕೆಟ್‌ ನೀಡುತ್ತಿದ್ದು, ಪ್ರಯಾಣದ ಶೇ 50ರಷ್ಟು ದರವನ್ನು ಸಚಿವಾಲಯ ಈಗಾಗಲೇ ಭರಿಸುತ್ತಿದೆ.2017ರಿಂದ 2020ರವರೆಗೆ ಹಿರಿಯ ನಾಗರಿಕರಿಗೆ ರಿಯಾಯಿತಿ ನೀಡಿರುವುದರಿಂದ ₹4,794 ಕೋಟಿ ಆದಾಯವನ್ನು ಸಚಿವಾಲಯವು ಕಳೆದುಕೊಂಡಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.