
‘ಮತಗಳ್ಳತನ’ ಮತ್ತು ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ’ (ಎಸ್‌ಐಆರ್)– ಇವು, ದೇಶದ ಒಟ್ಟು ರಾಜಕಾರಣದ ಸಂಕಥನವನ್ನೇ ಬದಲು ಮಾಡಿದ ಎರಡು ವಿಚಾರಗಳು. ‘ಚುನಾವಣಾ ಆಯೋಗವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ’ ಎನ್ನುವುದು ವಿರೋಧ ಪಕ್ಷಗಳ ಗಂಭೀರ ಆರೋಪ. ‘ಆಯೋಗವು ಸ್ವತಂತ್ರವಾಗಿದೆ’ ಎನ್ನುವುದು ಬಿಜೆಪಿಯ ಸಮರ್ಥನೆ.
ದೆಹಲಿ ವಿಧಾನಸಭೆ ಚುನಾವಣೆ ವೇಳೆ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ತಾವು ಸ್ಪರ್ಧಿಸಿದ ನವದೆಹಲಿ ಕ್ಷೇತ್ರದಲ್ಲಿ ಬೇರೆ ಕ್ಷೇತ್ರದ ಮತದಾರರನ್ನು ಸೇರಿಸಲಾಗಿದೆ ಮತ್ತು ತಮ್ಮ ಕ್ಷೇತ್ರದ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು. ಈ ಬಳಿಕ, ವಿರೋಧ ಪಕ್ಷದ ಒಬ್ಬೊಬ್ಬರೇ ನಾಯಕರು ಇಂಥ ಆರೋಪಗಳನ್ನು ಮಾಡಿದರು.
ಮಹಾರಾಷ್ಟ್ರ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮಹಾಮೋಸ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿ, ಪತ್ರಿಕೆಗಳಿಗೆ ಲೇಖನಗಳನ್ನೂ ಬರೆದರು. ಬಿಹಾರ ಚುನಾವಣೆಯಲ್ಲಿಯೂ ಚುನಾವಣಾ ಆಯೋಗವು ಅಕ್ರಮ ನಡೆಸಲಿದೆ; ಜೊತೆಗೆ, ಲೋಕಸಭೆ ಚುನಾವಣೆಯಲ್ಲಿ 70–100 ಸ್ಥಾನಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.
ಕಂಪ್ಯೂಟರ್ ಪರಿಶೀಲಿಸಬಹುದಾದ ಮತದಾರರ ಪಟ್ಟಿಯನ್ನು, ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ನೀಡಿ ಎಂದು ಕಾಂಗ್ರೆಸ್ ಮನವಿ ಮಾಡಿತ್ತು. ಆದರೆ, ಇಂಥ ಮಾಹಿತಿಗಳನ್ನು ನೀಡುವುದರಿಂದ ಮತದಾರರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಚುನಾವಣಾ ಆಯೋಗವು ಪ್ರತಿಕ್ರಿಯಿಸಿತ್ತು.
ಆದರೆ, ಮತಗಳ್ಳತನ ಸ್ವರೂಪದ ಬಗ್ಗೆ ಆಗಸ್ಟ್‌ನಿಂದ ರಾಹುಲ್ ಗಾಂಧಿ ಅವರು ಪಿಪಿಟಿ ಪ್ರೆಸೆಂಟೇಷನ್ ರೀತಿಯಲ್ಲಿ ನಾಲ್ಕು ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಈ ಪತ್ರಿಕಾಗೋಷ್ಠಿಗಳಲ್ಲಿ ರಾಹುಲ್ ಅವರು ಮಾಡಿದ ಎಲ್ಲ ಆರೋಪಗಳನ್ನು ಚುನಾವಣಾ ಆಯೋಗ ತಳ್ಳಿಹಾಕಿತು. ‘ಆರೋಪಗಳನ್ನು ಏಳು ದಿನಗಳಲ್ಲಿ ಸಾಬೀತು ಮಾಡದೆ ಇದ್ದಲ್ಲಿ ಕ್ಷಮೆ ಕೇಳಬೇಕು’ ಎಂದೂ ಆಯೋಗವು ರಾಹುಲ್ ಅವರಿಗೆ ತಾಕೀತು ಮಾಡಿತು.
ಮತಗಳ್ಳತನವನ್ನು ವಿರೋಧಿಸಿ ದೇಶದಾದ್ಯಂತ ಕಾಂಗ್ರೆಸ್ ಪ್ರತಿಭಟನೆ, ಸಹಿ ಸಂಗ್ರಹ ಅಭಿಯಾನ ಮಾಡಿತು. ಸಂಸತ್ ಅಧಿವೇಶನಗಳ ವೇಳೆಯೂ ಈ ಬಗ್ಗೆ ಚರ್ಚೆಗೆ ಅವಕಾಶ ಕೋರಲಾಯಿತು. ಆದರೆ, ಇದಕ್ಕೆ ಕೇಂದ್ರ ಸರ್ಕಾರವು ಅವಕಾಶ ಮಾಡಿಕೊಡಲಿಲ್ಲ. ವಿರೋಧ ಪಕ್ಷಗಳು ಸಂಸತ್ತಿನ ಎದುರು ಹಲವು ದಿನ ಪ್ರತಿಭಟನೆ ನಡೆಸಿದವು.
ಸದ್ದು ಮಾಡಿದ ಎಸ್‌ಐಆರ್ : ಮತಕಳವು ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಡೆಸುವು ದಾಗಿ ಚುನಾವಣಾ ಆಯೋಗವು ಘೋಷಿಸಿತು. ಇದು ವಿರೋಧ ಪಕ್ಷಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ‘ನಿರ್ದಿಷ್ಟ ಮತದಾರರನ್ನು ಪಟ್ಟಿಯಿಂದ ಕೈಬಿಡುವ ತಂತ್ರವಿದು’ ಎಂದು ವಿರೋಧ ಪಕ್ಷಗಳು ದೂರಿದವು.
ಈ ಬಳಿಕ, ದೇಶದಾದ್ಯಂತ ಈ ಪ್ರಕ್ರಿಯೆ ನಡೆಸಲು ಆಯೋಗ ಮುಂದಾಯಿತು. ಸದ್ಯ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಅಸ್ಸಾಂಗಾಗಿ ಬೇರೆಯೇ ವಿಧಾನದಲ್ಲಿ ಎಸ್‌ಐಆರ್ ಅನ್ನು ಆಯೋಗ ನಡೆಸುತ್ತಿದೆ. ಇದನ್ನು ಕೂಡ ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದೆ.
ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರು ಇದೇ ವರ್ಷ ಅಧಿಕಾರವಹಿಸಿಕೊಂಡರು. ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಪ್ರಧಾನಿ, ಲೋಕಸಭೆ ವಿಕ್ಷದ ನಾಯಕ ಹಾಗೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಇದ್ದರು. ಈ ನಿಯಮ ಬದಲಾಯಿಸಿರುವ ಕೇಂದ್ರ ಸರ್ಕಾರವು, ಮುಖ್ಯ ನ್ಯಾಯಮೂರ್ತಿಯನ್ನು ತೆಗೆದು, ಸಂಪುಟದ ಸಚಿವರನ್ನು ಸೇರಿಸಿದ್ದಾರೆ. ಈ ಸಮಿತಿಯೇ ಜ್ಞಾನೇಶ್ ಕುಮಾರ್ ಅವರು ಆಯ್ಕೆ ಮಾಡಿದೆ. ಆದರೆ, ಈ ಆಯ್ಕೆ ಮತ್ತು ಸಮಿತಿಯಲ್ಲಿ ಮಾಡಿದ ಬದಲಾವಣೆಯನ್ನು ರಾಹುಲ್ ಗಾಂಧಿ ಸೇರಿ ಎಲ್ಲ ವಿರೋಧ ಪಕ್ಷಗಳು ನಾಯಕರೂ ವಿರೋಧಿಸಿದ್ದಾರೆ.
ಪ್ರತಿ ವಿಧಾನಸಭೆ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ನುಸುಳುಕೋರರು ಸೇರಿಕೊಂಡಿದ್ದಾರೆ ಎಂದು ಆರೋಪಿಸುವ ಬಿಜೆಪಿಯು ಎಸ್‌ಐಆರ್ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿದೆ. ಆದರೆ, ಮತಗಳ್ಳತನಕ್ಕೆ ಅನುವು ಮಾಡಿಕೊಡುವ ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿದೆ, ಆ ಮೂಲಕ ಸಂವಿಧಾನವನ್ನು, ಸಾಂವಿಧಾನಿಕ ಸಂಸ್ಥೆಯನ್ನು ಹಾಳುಗೆಡವುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. 2025ರಲ್ಲಿ ಇವೇ ವಿಚಾರಗಳು ರಾಜಕಾರಣ ಚರ್ಚೆಯ ಪ್ರಮುಖ ವಿಚಾರಗಳಾಗಿದ್ದವು.
* 2025ರ ವಕ್ಫ್ (ತಿದ್ದುಪಡಿ) ಕಾಯ್ದೆಯು ದೇಶದ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸಿತು. ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ಮಧ್ಯೆ ದೊಡ್ಡ ಆರೋಪ ಪ್ರತ್ಯಾರೋಪ ನಡೆಯಿತು. ಪಶ್ಚಿಮ ಬಂಗಾಳ ಸೇರಿ ದೇಶದ ಹಲವು ಭಾಗಗಳಲ್ಲಿ ಹಿಂಸಾಚಾರವೂ ನಡೆಯಿತು
* ಗಣತಿಯೊಂದಿಗೆ ಜಾತಿ ಗಣತಿಯನ್ನೂ ಮಾಡುವುದಾಗಿ ಕೇಂದ್ರವು ಘೋಷಿಸಿತು
* ಲೋಕಸಭಾ ಕ್ಷೇತ್ರ ಮರುವಿಂಗಡಣೆ ಚರ್ಚೆಯು ಈ ವರ್ಷ ದೇಶದಲ್ಲಿ ನಡೆದ ದೊಡ್ಡ ಮಟ್ಟದಲ್ಲಿ ಚರ್ಚೆಗಳಲ್ಲಿ ಒಂದು. ಡಿಎಂಕೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಈ ಪ್ರಕ್ರಿಯೆಯ ಕುರಿತು ಭಾರಿ ವಿರೋಧ ವ್ಯಕ್ತಪಡಿಸಿದವು
* ಮೊಬೈಲ್ ಕಂಪನಿಗಳು ಮತ್ತು ಮೊಬೈಲ್ ಸೆಟ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳು ಸಂಚಾರ ಸಾಥಿ ಆ್ಯಪ್ ಅನ್ನು ಅಳವಡಿಸುವುದು ಕಡ್ಡಾಯ ಮಾಡಿ ಕೇಂದ್ರ ದೂರಸಂಪರ್ಕ ಸಚಿವಾಲಯ ಆದೇಶ ಹೊರಡಿಸಿತ್ತು. ಭಾರಿ ಜನಾಕ್ರೋಶದ ಬಳಿಕ, ಈ ನಿಯಮವನ್ನು ಕೇಂದ್ರ ಸರ್ಕಾರವು ವಾಪಸು ಪಡೆಯಿತು
* ಮುಖ್ಯಮಂತ್ರಿ, ಪ್ರಧಾನಿ ಮತ್ತು ಸಚಿವರು ಯಾವುದೇ ಪ್ರಕರಣದಲ್ಲಿ ಸತತ 30 ದಿನಗಳವರೆಗೆ ಜೈಲುವಾಸ ಅನುಭವಿಸಿದರೆ, ಅಂಥವರನ್ನು ಪದಚ್ಯುತಿಗೊಳಿಸುವ ಸಂವಿಧಾನದ 130ನೇ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿತ್ತು. ಇದು ವಿರೋಧ ಪಕ್ಷಗಳ ಮುಖ್ಯಮಂತ್ರಿಗಳನ್ನು ಕೆಳಗಿಳಿಸವ ಕುತಂತ್ರ ಎಂದು ವಿರೋಧ ಪಕ್ಷಗಳು ತೀವ್ರವಾಗಿ ಆರೋಪಿಸಿದವು. ಬಳಿಕ, ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ನೀಡಲಾಯಿತು
* ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಬದಲಿಗೆ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆ, 2025’ ಅನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿತು. ವಿಪಕ್ಷಗಳ ವಿರೋಧಗಳ ಮಧ್ಯೆಯೂ ಎರಡೂ ಸದನಗಳಲ್ಲಿ ಇದು ಅಂಗೀಕಾರ ಪಡೆದು, ರಾಷ್ಟ್ರಪತಿ ಅಂಕಿತವನ್ನೂ ಪಡೆಯಿತು.
ಮಣಿಪುರ: ಮುಂದುವರಿದ ಸಂಘರ್ಷ, ಪ್ರಧಾನಿ ಭೇಟಿ
2023ರಲ್ಲಿ ಮಣಿಪುರದಲ್ಲಿ ಆರಂಭಗೊಂಡ ಜನಾಂಗೀಯ ಸಂಘರ್ಷವು 2025ರಲ್ಲಿಯೂ ಮುಂದುವರಿದಿದೆ. ಶಾಂತಿ ಮಾತುಕತೆ, ಸೌಹಾರ್ದವು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯನ್ನೂ ತಲುಪಿದೆ. ಮುಖ್ಯಮಂತ್ರಿಯಾಗಿದ್ದ ಬಿರೇನ್ ಸಿಂಗ್ ರಾಜೀನಾಮೆ ನೀಡಿದರು. ಬಳಿಕ, ಕೇಂದ್ರ ಸರ್ಕಾರವು ಇಲ್ಲಿಗೆ ರಾಷ್ಟ್ರಪತಿ ಆಳ್ವಿಕೆ ಹೇರಿತು. ಆದರೂ, ರಾಜ್ಯದಲ್ಲಿ ಸಂಘರ್ಷ ನಡೆಯುತ್ತಲೇ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುಕ್ಕೆ ಭೇಟಿ ನೀಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಎರಡು ವರ್ಷಗಳಿಂದ ನಿರಂತರವಾಗಿ ಆರೋಪಿಸುತ್ತಲೇ ಇದ್ದವು. ₹7,300 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಪ್ರಧಾನಿ ಮೋದಿ ಅವರು ಸಂಘರ್ಷ ಆರಂಭವಾದ ಎರಡು ವರ್ಷಗಳ ಬಳಿಕ ಸೆಪ್ಟೆಂಬರ್ 13ರಂದು ಮಣಿಪುರಕ್ಕೆ ಭೇಟಿ ನೀಡಿದರು. 13ರಿಂದ 15 ಸೆಪ್ಟೆಂಬರ್‌ನಲ್ಲಿ 5 ರಾಜ್ಯಗಳಿಗೆ ಪ್ರಧಾನಿ ಭೇಟಿ ನೀಡಿದ್ದರು.
75 ವರ್ಷಕ್ಕೆ ನಿವೃತ್ತಿ: ಹೇಳಿಕೆ ಹಿಂಪಡೆದ ಮೋಹನ್ ಭಾಗವತ್
‘75 ವರ್ಷ ತುಂಬಿದ ಬಳಿಕ ನಿವೃತ್ತಿ ಹೊಂದಬೇಕು. ಆ ಮೂಲಕ ಯುವಕರಿಗೆ ಜಾಗ ಮಾಡಿಕೊಡಬೇಕು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದು ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿಯೇ ನೀಡಿದ ಹೇಳಿಕೆ ಎನ್ನಲಾಗಿತ್ತು. ಇದು ದೇಶದಲ್ಲಿ ದೊಡ್ಡ ಚರ್ಚೆಯನ್ನೇ ಹುಟ್ಟು ಹಾಕಿತ್ತು. ಈ ರೀತಿಯ ಹೇಳಿಕೆಯನ್ನು ನೀಡಿಯೇ ಇಲ್ಲ ಎಂದು ಕೆಲವೇ ದಿನಗಳ ಬಳಿಕ ಮೋಹನ್ ಭಾಗವತ್ ಅವರು ಹೇಳಿದರು.
ಸಂವಿಧಾನದ ಪ್ರಸ್ತಾವನೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯಾತೀತ’ ಎನ್ನುವ ಪದಗಳನ್ನು ತೆಗೆದು ಹಾಕಬೇಕು ಎಂದು ಆರ್‌ಎಸ್‌ಎಸ್‌ನ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿದ್ದರು. ‘ಆರ್ಗನೈಜರ್’ ಪತ್ರಿಕೆ ಕೂಡ ಇದನ್ನು ಸಮರ್ಥಿಸಿ ಲೇಖನ ಪ್ರಕಟಿಸಿತ್ತು. ಇದು ವಿವಾದದ ಸ್ವರೂಪ ಪಡೆದಿತ್ತು.
ನರೇಗಾ ಬದಲಿಗೆ ‘ಜಿ ರಾಮ್ ಜಿ’
‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಬದಲಿಗೆ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ) ಮಸೂದೆ, 2025’ ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತು. ವಿರೋಧ ಪಕ್ಷಗಳ ವಿರೋಧಗಳ ಮಧ್ಯೆಯೂ ಎರಡೂ ಸದನಗಳಲ್ಲಿ ಇದು ಅಂಗೀಕಾರ ಪಡೆದು, ರಾಷ್ಟ್ರಪತಿ ಅಂಕಿತವನ್ನೂ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.