ADVERTISEMENT

ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನಾ ವರದಿಗೆ ಜೆಪಿಸಿ ಗ್ರೀನ್ ಸಿಗ್ನಲ್

ಉದ್ದೇಶಿತ ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನಾ ವರದಿ ಸಲ್ಲಿಸಲು ಬಿಜೆಪಿಯ ಹಿರಿಯ ಸಂಸದ ಜಗದಂಬಿಕಾ ಪಾಲ್ ನೇತೃತ್ವದ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಅನುಮೋದನೆ ನೀಡಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2025, 11:02 IST
Last Updated 27 ಜನವರಿ 2025, 11:02 IST
<div class="paragraphs"><p>ಜಗದಂಬಿಕಾ ಪಾಲ್ </p></div>

ಜಗದಂಬಿಕಾ ಪಾಲ್

   

ನವದೆಹಲಿ: ಉದ್ದೇಶಿತ ವಕ್ಫ್ (ತಿದ್ದುಪಡಿ) ಮಸೂದೆಯ ಪರಿಶೀಲನಾ ವರದಿ ಸಲ್ಲಿಸಲು ಬಿಜೆಪಿ ಹಿರಿಯ ಸಂಸದ ಜಗದಂಬಿಕಾ ಪಾಲ್ ನೇತೃತ್ವದ ಸಂಸತ್ತಿನ ಜಂಟಿ ಸಮಿತಿ (ಜೆಪಿಸಿ) ಅನುಮೋದನೆ ನೀಡಿದೆ.

ತಿದ್ದುಪಡಿ ಮಸೂದೆಗೆ ಪ್ರಮುಖ 14 ಬದಲಾವಣೆ ಮಾಡಲು ಒಪ್ಪಿಗೆ ಸೂಚಿಸಿ ಸಮಿತಿ ಸೋಮವಾರ ಅನುಮೋದನೆ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಒಟ್ಟು 66 ಬದಲಾವಣೆಗಳನ್ನು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ವಿರೋಧ ಪಕ್ಷಗಳಿಂದ ಬಂದಿದ್ದ ಸದಸ್ಯರು ಬದಲಾವಣೆ ಮಾಡದಂತೆ ಪಟ್ಟು ಹಿಡಿದಿದ್ದರು. ಬಹುತೇಕ ಬಿಜೆಪಿ ಸಂಸದರು ಸೂಚಿಸಿರುವ ಬದಲಾವಣೆಗಳನ್ನು ಸಮಿತಿ ಎತ್ತಿ ಹಿಡಿದಿದೆ. ವಿರೋಧ ಪಕ್ಷಗಳ ಸಂಸದರು ಸೂಚಿಸಿದ್ದ ಬದಲಾವಣೆಗಳಿಗೆ ಮನ್ನಣೆ ನೀಡಲಾಗಿಲ್ಲ ಎನ್ನಲಾಗಿದೆ.

ಅದಾಗ್ಯೂ ಪ್ರಸ್ತಾವಿತ 14 ಬದಲಾವಣೆಗಳನ್ನು ಅಂಗೀಕರಿಸಲು ಇದೇ ಜನವರಿ 29 ರಂದು ಮತದಾನ ನಡೆಯಲಿದೆ. ಜ.31 ರಂದು ಅಂತಿಮ ವರದಿ ಸಲ್ಲಿಸುವುದಾಗಿ ಜಗದಂಬಿಕಾ ಪಾಲ್ ತಿಳಿಸಿದ್ದಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಸಂಸತ್‌ನಲ್ಲಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಬಿಜೆಪಿ ನೇತೃತ್ವದ ಆಡಳಿತಾರೂಢ ಎನ್‌ಡಿಎ ಸರ್ಕಾರ ಮಂಡಿಸಿತ್ತು. ಇದಕ್ಕೆ ವಿರೋಧ ಪಕ್ಷಗಳು ಅಡ್ಡಿಪಡಿಸಿದ್ದವು.

ಹೀಗಾಗಿ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಪರಿಶೀಲಿಸಿ ಅಂತಿಮ ವರದಿ ಸಲ್ಲಿಸಲು ಪಾಲ್ ನೇತೃತ್ವದ ಜೆಪಿಸಿಯನ್ನು ರಚಿಸಲಾಗಿತ್ತು. ಇದರಲ್ಲಿ ಬಿಜೆಪಿಯ 23 ಹಾಗೂ ಬೇರೆ ಬೇರೆ ಪಕ್ಷಗಳ 44 ಸದಸ್ಯರಿದ್ದರು.

ವರದಿ ಸಲ್ಲಿಸಲು 2023ರ ನವೆಂಬರ್ 29ರ ಗಡುವನ್ನು ನೀಡಲಾಗಿತ್ತು. ಆದರೆ, ಸಮಿತಿಯಲ್ಲಿ ಒಮ್ಮತ ಮೂಡದ ಕಾರಣ ಅಂತಿಮ ವರದಿ ಸಲ್ಲಿಸಲು ಇದೇ ಫೆಬ್ರುವರಿಯ ಬಜೆಟ್ ಅಧಿವೇಶನದ ಕೊನೆಯ ದಿನ ಅಂದರೆ ಫೆಬ್ರುವರಿ 13ರವರೆಗೆ ಗಡುವು ವಿಸ್ತರಿಸಲಾಗಿತ್ತು.

ಸಮಿತಿಯ ಮುಖ್ಯಸ್ಥ ಜಗದಂಬಿಕಾ ಪಾಲ್‌ ಅವರು ಏಕಪಕ್ಷೀಯವಾಗಿ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋ‍ಪಿಸಿ ವಿರೋಧ ಪಕ್ಷಗಳ ಸಂಸದರು ಜನವರಿ 24 ರಂದು ಪ್ರತಿಭಟನೆ ನಡೆಸಿದ್ದರು. ಇದರಿಂದ ಪಾಲ್ ಅವರು 10 ಸಂಸದರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದರಿಂದ ಸಮಿತಿಯಲ್ಲಿ ಕೋಲಾಹಲ ಉಂಟಾಗಿತ್ತು.

ವಕ್ಫ್ ಆಸ್ತಿಗಳ ಅತಿಕ್ರಮಣ, ವಕ್ಫ್ ಮಂಡಳಿ ಹೆಸರುಗಳಲ್ಲಿ ರೈತರ ಮೇಲೆ ದೌರ್ಜನ್ಯ, ಭ್ರಷ್ಟಾಚಾರ ಸೇರಿದಂತೆ ಮುಂತಾದ ಗೊಂದಲ, ದೂರುಗಳನ್ನು ನಿವಾರಿಸಲು ಹಾಗೂ ದೇಶದಲ್ಲಿನ ವಕ್ಫ್ ಮಂಡಳಿಯ ಆಸ್ತಿಗಳ ನಿರ್ವಹಣೆ ಸಂಬಂಧ ಕೇಂದ್ರ ಸರ್ಕಾರ ವಕ್ಫ್ (ತಿದ್ದುಪಡಿ) ಕಾನೂನನ್ನು ತರಲು ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.