ಪುರೂಲಿಯಾ: ‘ಮಮತಾ ಬ್ಯಾನರ್ಜಿ ಅವರು ಬರ್ಮುಡಾ ಧರಿಸಲಿ’ ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಟಿಎಂಸಿ ನಾಯಕರು ಇದನ್ನು ವಿಕೃತ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ, ದಿಲೀಪ್‌ರದ್ದು ವಿಕೃತ ಮನಸ್ಸು ಎಂದು ಟೀಕಿಸಲಾಗಿದೆ.
ಪಶ್ಚಿಮ ಬಂಗಾಳದ ಪುರೂಲಿ ಯಾದಲ್ಲಿ ಮಂಗಳವಾರ ನಡೆದಿದ್ದ ಪ್ರಚಾರ ಸಭೆಯಲ್ಲಿ ದಿಲೀಪ್ ಅವರು ಮಾತನಾಡಿದ್ದರು. ‘ಮಮತಾ ಬ್ಯಾನರ್ಜಿ ಅವರ ಕಾಲಿನ ಪ್ಲಾಸ್ಟರ್ ಅನ್ನು ಕತ್ತರಿಸಲಾಗಿದೆ. ಈಗ ಕ್ರೇಪ್ ಬ್ಯಾಂಡ್ ಹಾಕಲಾಗಿದೆ. ಅವರು ಈಗ ಎಲ್ಲರಿಗೂ ತಮ್ಮ ಕಾಲನ್ನು ತೋರಿಸುತ್ತಿದ್ದಾರೆ. ಅವರು ಸೀರೆ ಉಡುತ್ತಾರೆ, ಆದರೆ ಅವರ ಕಾಲು ಎಲ್ಲರಿಗೂ ಕಾಣುತ್ತದೆ. ಈ ರೀತಿ ಸೀರೆ ಉಡುವವರನ್ನು ನಾನು ನೋಡಿಯೇ ಇಲ್ಲ. ಕಾಲನ್ನು ಎಲ್ಲರಿಗೂ ತೋರಿಸಲೇಬೇಕು ಎಂದು ನಿಮ್ಮ ಮನಸ್ಸಿನಲ್ಲಿ ಇದ್ದರೆ, ಬರ್ಮುಡಾ ಹಾಕಿಕೊಳ್ಳಿ. ಆಗ ಎಲ್ಲರೂ ಕಾಲನ್ನು ಚೆನ್ನಾಗಿ ನೋಡುತ್ತಾರೆ’ ಎಂದು ದಿಲೀಪ್ ಹೇಳಿದ್ದರು.
‘ಸೀರೆ ಏಕೆ ಉಟ್ಟಿದ್ದೀರಿ? ನಿಮ್ಮ ಕಾಲು ಕಾಣುವಂತೆ ಬರ್ಮುಡಾ ಹಾಕಿಕೊಳ್ಳಿ ಎಂದು ಮಮತಾ ದೀದಿ ಅವರಿಗೆಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಹೇಳಿದ್ದಾರೆ. ಪಶ್ಚಿಮ ಬಂಗಾಳವನ್ನು ಗೆಲ್ಲುತ್ತೇವೆ ಎಂದು ವಿಕೃತ ಮನಸ್ಸಿನ ಈ ಕೋತಿಗಳು ಎಣಿಸಿವೆ’ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.