ADVERTISEMENT

ನಾವು ಮತ್ತೆ ಬರುತ್ತೇವೆ... ಸ್ವಲ್ಪ ಸಮಯ ಕಾಯಿರಿ: ದೇವೇಂದ್ರ ಫಡಣವೀಸ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:48 IST
Last Updated 1 ಡಿಸೆಂಬರ್ 2019, 13:48 IST
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌    

ಮುಂಬೈ: ‘ನಾವು ಮತ್ತೆ ಬರುತ್ತೇವೆ... ಸ್ವಲ್ಪ ಸಮಯ ಕಾಯಿರಿ’ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯಲು ಬಿಜೆಪಿ ವಿಫಲವಾಗಿದ್ದರ ಬಗ್ಗೆ ಮಾತನಾಡಿರುವ ಅವರು, ‘ನಾವು ಮತ್ತೆ ಬರುತ್ತೇವೆ... ಸ್ವಲ್ಪ ಸಮಯ ಕಾಯಿರಿ,’ ಎಂದಿದ್ದಾರೆ. ಆ ಮೂಲಕ ಮತ್ತೆ ಅಧಿಕಾರ ಹಿಡಿಯುವ ಪ್ರಯತ್ನದಿಂದ ತಾವು ಹಿಂದೆ ಸರಿದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿದೆ. ನಾವು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಅಕ್ಟೋಬರ್‌ 21ರ ವಿಧಾನಸಭಾ ಚುನಾವಣೆಯಲ್ಲಿ ಶೇ.70 ರಷ್ಟು ಸ್ಟ್ರೈಕ್‌ ರೇಟ್‌ ಹೊಂದಿದ್ದೇವೆ. ಆದರೆ, ಶೇ.40 ರಷ್ಟು ಅಂಕಗಳನ್ನು ಹೊಂದಿದವರು ಸರ್ಕಾರ ರಚಿಸಿದ್ದಾರೆ,’ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಫಡಣವೀಸ್‌ಹೇಳಿದ್ದಾರೆ.

ADVERTISEMENT

ಮಹಾರಾಷ್ಟ್ರದಲ್ಲಿ ರಚನೆಯಾದ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್‌ ಮೈತ್ರಿ ಸರ್ಕಾರವನ್ನು ಪ್ರಜಾಪ್ರಭುತ್ವದ ಭಾಗವಾಗಿ ಒಪ್ಪಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.

‘ನಾನು ಮತ್ತೆ ಬರುತ್ತೇನೆ ಎಂದಿದ್ದೆ. ಆದರೆ, ನಿಮಗೆ ವೇಳಾಪಟ್ಟಿ ಕೊಡುವುದನ್ನು ಮರೆತಿದ್ದೆ. ನಾನು ನಿಮಗೆ ಒಂದು ವಿಚಾರದ ಬಗ್ಗೆ ಭರವಸೆ ನೀಡಬಹುದು. ನೀವು ಕೆಲ ಸಮಯದವರೆಗೆ ಕಾಯಬೇಕಾಗುತ್ತದೆ. ಕಳೆದ ಐದು ವರ್ಷದ ಅವಧಿಯಲ್ಲಿ ನಾನು ಹಲವು ಯೋಜನೆಗಳನ್ನು ಘೋಷಿಸಿದ್ದೆ. ಅವುಗಳ ಮೇಲೆ ಕೆಲಸ ಮಾಡಲು ಆರಂಭಿಸಿದ್ದೆ. ಅವುಗಳ ಉದ್ಘಾಟನೆಗೆ ನಾನೇ ಬಂದರೂ ಬರಬಹುದು,’ ಎಂದು ಹೇಳಿದ್ದಾರೆ. ಆ ಮೂಲಕ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ತಾವು ಪ್ರಯತ್ನ ಮಾಡುತ್ತಿರುವುದಾಗಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.