
ಸಿಆರ್‌ಪಿಎಫ್ ಯೋಧರು
ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದ್ದು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 480 ತುಕಡಿಗಳನ್ನು ಮಾರ್ಚ್ 1ರಿಂದಲೇ ಅಲ್ಲಿಗೆ ನಿಯೋಜಿಸಲಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚುನಾವಣಗೆಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ, ಮಾರ್ಚ್ 1ರಿಂದ ಮೊದಲ ತಂಡದ 240 ತುಕಡಿಗಳನ್ನು ಹಾಗೂ ಮಾ. 10ರಂದು ಎರಡನೇ ಹಂತದಲ್ಲಿ ಅಷ್ಟೇ ಸಂಖ್ಯೆಯ ತುಕಡಿಗಳನ್ನು ನಿಯೋಜಿಸಲಾಗುತ್ತದೆ. ಈ ತುಕಡಿಗಳಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಇಂಡೊ-ಟಿಬೆಟಿಯನ್ ಗಡಿ ಪೊಲೀಸ್ ಮತ್ತು ಸಶಸ್ತ್ರ ಸೀಮಾ ಬಲದ ಸಿಬ್ಬಂದಿ ಇರುತ್ತಾರೆ ಎಂದು ಅಧಿಕಾರಿ ವಿವರಿಸಿದರು.
ಚುನಾವಣಾ ಪ್ರಕ್ರಿಯೆ ಕುರಿತು ವಿಶ್ವಾಸ ಮೂಡಿಸುವ ಕೆಲಸವನ್ನು ಈ ಪಡೆಗಳು ಮಾಡಲಿವೆ. ವಿದ್ಯುನ್ಮಾನ ಮತಯಂತ್ರಗಳನ್ನು ಇರಿಸುವ ಭದ್ರತಾ ಕೊಠಡಿಗಳಿಗೆ ರಕ್ಷಣೆ ಒದಗಿಸುವುದೂ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ಭದ್ರತಾ ಕಾರ್ಯಗಳಲ್ಲಿ ಸಶಸ್ತ್ರ ಪಡೆಗಳ ಸಿಬ್ಬಂದಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಂತರ, ಫೆಬ್ರುವರಿ 28ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲು ನಿರ್ಧರಿಸಲಾಗಿದೆ. ಚುನಾವಣಾ ವೇಳಾಪಟ್ಟಿಯನ್ನು ಮಾರ್ಚ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.