ADVERTISEMENT

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ| 6ನೇ ಹಂತದಲ್ಲಿ ಶೇ 79 ಮತದಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 21:11 IST
Last Updated 22 ಏಪ್ರಿಲ್ 2021, 21:11 IST
ಬುರ್ದ್ವಾನ್‌ನಲ್ಲಿ ಮತದಾನಕ್ಕೆ ಸಾಲುಗಟ್ಟಿ ನಿಂತಿದ್ದ ಮತದಾರರು --–ಪಿಟಿಐ ಚಿತ್ರ
ಬುರ್ದ್ವಾನ್‌ನಲ್ಲಿ ಮತದಾನಕ್ಕೆ ಸಾಲುಗಟ್ಟಿ ನಿಂತಿದ್ದ ಮತದಾರರು --–ಪಿಟಿಐ ಚಿತ್ರ   

ಕೋಲ್ಕತ್ತ: ಕೆಲವು ಹಿಂಸಾಚಾರದ ಘಟನೆಗಳ ನಡುವೆಯೇ ಪಶ್ಚಿಮ ಬಂಗಾಳ ವಿಧಾನಸಭೆಗೆ ಗುರುವಾರ ಆರನೇ ಹಂತದ ಮತದಾನ ನಡೆಯಿತು. ಸಂಜೆ 5 ಗಂಟೆವರೆಗಿನ ಮಾಹಿತಿ ಪ್ರಕಾರ, ಶೇ 79.09ರಷ್ಟು ಜನರು ಹಕ್ಕು ಚಲಾಯಿಸಿದ್ದಾರೆ.

ಬಾರಕ್‌ಪುರ ಕ್ಷೇತ್ರದ ಟಿಟಾಗಢ ಎಂಬಲ್ಲಿ ಟಿಎಂಸಿ ಕಾರ್ಯಕರ್ತರು ಕಚ್ಚಾಬಾಂಬ್ ಎಸೆದಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನೆಯಲ್ಲಿ ಮಗು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ. ಒಬ್ಬ ಮೃತಪಟ್ಟಿದ್ದಾನೆ. ಟಿಎಂಸಿ ಬೆಂಬಲಿತ ಗೂಂಡಾಗಳೂ ತಮ್ಮ ಕಚೇರಿಯನ್ನು ಧ್ವಂಸ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಉತ್ತರ 24 ಪರಗಣ ಜಿಲ್ಲೆಯ ಬಾಗ್ದಾ ಕ್ಷೇತ್ರದಲ್ಲಿ ರಾಜ್ಯ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ADVERTISEMENT

ಅಶೋಕ್‌ನಗರ ಕ್ಷೇತ್ರದಲ್ಲಿ ಕೇಂದ್ರ ಪಡೆಗಳು ತಮ್ಮ ಕಾರ್ಯಕರ್ತರ ಮೇಲೆ ಗುಂಡು ಹಾರಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ಆದರೆ ಯಾವುದೇ ಗುಂಡಿನ ದಾಳಿ ನಡೆದಿಲ್ಲ ಎಂದಿರುವ ಆಯೋಗ, ಆರೋಪವನ್ನು ತಳ್ಳಿಹಾಕಿದೆ.

ರೋಡ್‌ ಶೋಗೆ ನಿಷೇಧ: ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ಕೋವಿಡ್ ತಡೆ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ರೋಡ್‌ ಶೋ ಮತ್ತು ವಾಹನ ಜಾಥಾಗಳನ್ನು ಚುನಾವಣಾ ಆಯೋಗವು ನಿಷೇಧಿಸಿದೆ. ಸಾರ್ವಜನಿಕ ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ಹೇಳಲಾಗಿದೆ. ಗುರುವಾರ ಸಂಜೆ ಯಿಂದಲೇ ಇದು ಜಾರಿಗೆ ಬಂದಿದೆ.

ರೆಸಾರ್ಟ್‌ನಲ್ಲಿ ಅಭ್ಯರ್ಥಿಗಳು

ಗುವಾಹಟಿ: ಬಿಜೆಪಿಯು ಶಾಸಕರ ಖರೀದಿಯಲ್ಲಿ ತೊಡಗಿದಲ್ಲಿ, ಆ ಪ್ರಯತ್ನವನ್ನು ವಿಫಲಗೊಳಿಸುವ ಉದ್ದೇಶದಿಂದ ಅಸ್ಸಾಂನ ಕಾಂಗ್ರೆಸ್ ಘಟಕವು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ 93 ಅಭ್ಯರ್ಥಿಗಳನ್ನು ಗುವಾಹಟಿಯ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ಗೆ ಸ್ಥಳಾಂತರಿಸಿದೆ.

ಕಾಂಗ್ರೆಸ್ ಅಭ್ಯರ್ಥಿಗಳು ಗುರುವಾರ ಬೆಳಿಗ್ಗೆಯಿಂದ ಸೋನಾಪುರದ ರೆಸಾರ್ಟ್ ತಲುಪಲು ಶುರು ಮಾಡಿದರು. ಭಯವು ಎಷ್ಟು ಪ್ರಬಲವಾಗಿದೆ ಎಂದರೆ, ಕಾಂಗ್ರೆಸ್ ಪಕ್ಷದ ಕನಿಷ್ಠ 40 ವಿಶ್ವಾಸಾರ್ಹ ಸ್ವಯಂಸೇವಕರನ್ನು ರೆಸಾರ್ಟ್‌ ಕೆಲಸದ ಹುಡುಗರ ಬದಲಿಗೆ ನಿಯೋಜಿಸಲಾಗಿದೆ. ಅಭ್ಯರ್ಥಿಗಳನ್ನು ಬಿಜೆಪಿ ಕಡೆಯವರು ಸಂಪರ್ಕಿಸದಂತೆ ತಡೆಯಲು ಈ ರೀತಿ ಮಾಡಲಾಗಿದೆ.

ಮತಯಂತ್ರಗಳಿಗೆ ಕಾರ್ಯಕರ್ತರ ಕಾವಲು

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ರಾಜ್ಯ ಕಾಯುತ್ತಿದೆ. ರಾಜಕೀಯ ಪಕ್ಷಗಳು ಹಾಗೂ ಕಾರ್ಯಕರ್ತರಿಗೆ ಫಲಿತಾಂಶದ ಮೇಲೆ ಭಾರಿ ಕುತೂಹಲವಿದೆ. ರಾಜಕಾರಣಿಗಳ ಭವಿಷ್ಯ ಭದ್ರವಾಗಿರುವ ಮತಯಂತ್ರಗಳನ್ನು ರಾಜ್ಯದ 78 ಕೇಂದ್ರಗಳಲ್ಲಿ ಸುಭದ್ರವಾಗಿ ಇರಿಸಲಾಗಿದೆ. ಮತಯಂತ್ರ ಇರಿಸಿರುವ ಈ ಕೇಂದ್ರಗಳಿ ಸುತ್ತ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳ ಕಾರ್ಯಕರ್ತರು ದಿನದ 24 ಗಂಟೆ ಕಾವಲು ಕಾಯುತ್ತಿದ್ದಾರೆ.

ಪ್ರತಿಯೊಂದು ಕೊಠಡಿ‌ ಬಳಿಯೂ ಪಕ್ಷಗಳ ಸುಮಾರು 20 ಜನರು ಹಗಲು ರಾತ್ರಿ ಎನ್ನದೆ ಕಾವಲಾಗಿದ್ದಾರೆ. ಮತಯಂತ್ರ ಹಾಗೂ ಅವುಗಳನ್ನು ಇರಿಸಿರುವ ಕೋಣೆಗಳನ್ನು ಭದ್ರಪಡಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸತ್ಯವ್ರತ ಸಾಹೂ ಅವರು ಸ್ಪಷ್ಟನೆ ನೀಡಿದ್ದರೂ ಪಕ್ಷಗಳು ಭದ್ರತೆಗೆ ಕಾರ್ಯಕರ್ತರನ್ನು ನಿಯೋಜಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.