ADVERTISEMENT

‘ಇಲ್ಲಿ ಗೆದ್ದು ದೆಹಲಿಗೆ ಹೋಗುವೆ’-ಮಮತಾ ಬ್ಯಾನರ್ಜಿ

ಬಿಜೆಪಿಗೆ ನೇರ ಸವಾಲಿನ ಜತೆಗೆ ಮಹತ್ವಾಕಾಂಕ್ಷೆ ಪ್ರಕಟಿಸಿದ ಮಮತಾ ಬ್ಯಾನರ್ಜಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 22:13 IST
Last Updated 18 ಮಾರ್ಚ್ 2021, 22:13 IST
ಮಮತಾ ಅವರು ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಾಲೈಕುಂಡದಲ್ಲಿ ಸಮಾವೇಶ ಉದ್ದೇಶಿಸಿ ಗುರುವಾರ ಮಾತನಾಡಿದರು ಪಿಟಿಐ ಚಿತ್ರ
ಮಮತಾ ಅವರು ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಾಲೈಕುಂಡದಲ್ಲಿ ಸಮಾವೇಶ ಉದ್ದೇಶಿಸಿ ಗುರುವಾರ ಮಾತನಾಡಿದರು ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಗೆ ನೇರ ಸವಾಲು ಹಾಕುವುದರ ಜತೆಗೆ ತಮಗೆ ರಾಷ್ಟ್ರ ಮಟ್ಟದಲ್ಲಿ ಮಹತ್ವಾಕಾಂಕ್ಷೆ ಇದೆ ಎಂಬ ಸಂದೇಶವನ್ನೂ ಗುರುವಾರ ರವಾನಿಸಿದ್ದಾರೆ.

‘ವಿಧಾನಸಭೆ ಚುನಾವಣೆಗಳು ಮುಗಿಯುವ ತನಕ ಕಾಯಿರಿ. ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ದೆಹಲಿಯಲ್ಲಿರುವ ಸರ್ಕಾರವನ್ನು (ಕೇಂದ್ರ) ಉರುಳಿಸಲು ಹೋಗುತ್ತೇನೆ’ ಎಂದು ಪಶ್ಚಿಮ ಮೇದಿನಿಪುರ ಜಿಲ್ಲೆಯ ಕಾಲೈಕುಂಡದಲ್ಲಿ ನಡೆದ ಸಮಾವೇಶ ಉದ್ದೇಶಿಸಿ ಹೇಳಿದರು.

ಚುನಾವಣೆ ಸಂದರ್ಭದಲ್ಲಿ ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳಲ್ಲಿ ಬರುವ ಬಿಜೆಪಿ ಮುಖಂಡರು ಜನರಿಗೆ ಆಮಿಷ ಒಡ್ಡಲು ಚೀಲಗಟ್ಟಲೆ ದುಡ್ಡು ತರುತ್ತಾರೆ. ಆದರೆ, ಬಿಕ್ಕಟ್ಟುಗಳ ಸಂದರ್ಭದಲ್ಲಿ ಅವರು ಯಾರೂ ಇಲ್ಲಿ ಕಾಣ ಸಿಗುವುದಿಲ್ಲ ಎಂದರು.

ADVERTISEMENT

‘ನಾವು ದೆಹಲಿಯಲ್ಲಿ ಕೂಡ ಪರಿವರ್ತನೆ ತರುತ್ತೇವೆ ಎಂಬ ಕಾರಣಕ್ಕೆ ಅವರಿಗೆ (ಬಿಜೆಪಿ) ಭಯವಾಗಿದೆ. ಹಾಗಾಗಿಯೇ ಅವರು ಪ‍ಶ್ಚಿಮ ಬಂಗಾಳವನ್ನು ಗುರಿಯಾಗಿಸಿಕೊಂಡಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಅವರಿಗೆ ವಲಸಿಗ ಕಾರ್ಮಿಕರ ಬಗ್ಗೆ ಕರುಣೆಯೇ ಇರಲಿಲ್ಲ. ಆ ಪಕ್ಷವು ಇವರನ್ನೆಲ್ಲ ಪೀಡಕರು ಮತ್ತು ರಕ್ಕಸರು ಎಂಬಂತೆ ಚಿತ್ರಿಸಿತ್ತು’ ಎಂದು ಮಮತಾ ಹೇಳಿದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಮುಂಬೈನಲ್ಲಿ ಸಿಲುಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಕರೆತರಲು ನಾನು ಹಣ ಕಳುಹಿಸಿದ್ದೆ. ರಾಜಸ್ಥಾನದಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಕರೆತರಲು ಬಸ್‌ ಕಳುಹಿಸಿದ್ದೆ. ನಿದ್ದೆ ಮಾಡುತ್ತಿದ್ದ ಮಕ್ಕಳನ್ನುಚಕ್ರ ಇರುವ ಸೂಟ್‌ಕೇಸ್‌ನಲ್ಲಿ ಕೂರಿಸಿಕೊಂಡು ಮಹಿಳೆಯರು ಹೇಗೆ ನಡೆದು ಬಂದಿದ್ದಾರೆ ಎಂಬುದನ್ನು ನೀವೆಲ್ಲ ನೋಡಿಲ್ಲವೇ? ಆದರೆ, ಅವರಿಗೆ (ಬಿಜೆಪಿ) ಯಾವ ಕನಿಕರವೂ ಇಲ್ಲ. ಅವರದ್ದು ಕ್ರೂರಿಗಳು ಮತ್ತು ರಕ್ಕಸರ ಪಕ್ಷ’ ಎಂದು ಮಮತಾ ಟೀಕಿಸಿದ್ದಾರೆ.

ಟಿಎಂಸಿ ಅಭ್ಯರ್ಥಿ ಯಾರು ಎಂಬುದನ್ನು ನೋಡುವುದಕ್ಕೇ ಹೋಗಬೇಡಿ. ಪಕ್ಷಕ್ಕೆ ಮತ ಹಾಕಿ. ಹಾಗಾದರೆ ಮಾತ್ರ ಜನರಿಗಾಗಿ
ತಾವು ಮಾಡುತ್ತಿರುವ ಕೆಲಸ ಮುಂದುವರಿಸಲು ಸಾಧ್ಯ ಎಂದು ಮಮತಾ ಹೇಳಿದರು.

‘ಹೆಸರು ಅಳಿಸುತ್ತಾರೆ’

ಗಣತಿಗೆ ಬಂದಾಗ ವ್ಯಕ್ತಿಯು ಮನೆಯಲ್ಲಿ ಇಲ್ಲದಿದ್ದರೆ ಕೇಂದ್ರ ಸರ್ಕಾರದವರು ಮತದಾರರ ಪಟ್ಟಿಯಿಂದಲೇ ಅವರ ಹೆಸರು ಅಳಿಸಿ ಹಾಕುತ್ತಾರೆ. ಏನೇ ಆದರೂ ಪಶ್ಚಿಮ ಬಂಗಾಳದಲ್ಲಿ ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಪರಿಷ್ಕರಣೆಗೆ ಅವಕಾಶ ಕೊಡುವುದಿಲ್ಲ ಎಂದು ಮಮತಾ ಹೇಳಿದ್ದಾರೆ.

ಸಿಪಿಎಂ ಮತ್ತು ಕಾಂಗ್ರೆಸ್ ಪಕ್ಷವು ಬಿಜೆಪಿ ಜೊತೆ ಶಾಮೀಲಾಗಿದೆ. ಹಾಗಾಗಿ, ಎಡರಂಗದ ಕಾರ್ಯಕರ್ತರು ಟಿಎಂಸಿಗೆ ಮತ ಹಾಕಬೇಕು ಎಂದು ಮಮತಾ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.