ADVERTISEMENT

ಕೇಂದ್ರಕ್ಕೆ ₹ 30,000ಕೋಟಿ ದೊಡ್ಡದಲ್ಲ; ಸಾರ್ವತ್ರಿಕ ಲಸಿಕೆ ಯೋಜನೆ ರೂಪಿಸಿ: ಮಮತಾ

ಏಜೆನ್ಸೀಸ್
Published 8 ಮೇ 2021, 9:10 IST
Last Updated 8 ಮೇ 2021, 9:10 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ʼದೇಶದಲ್ಲಿ ಸಾರ್ವತ್ರಿಕ ಲಸಿಕೆ ಯೋಜನೆ ರೂಪಿಸಬೇಕು. ಅದಕ್ಕೆ ಬೇಕಾಗುವ₹ 30,000 ಕೋಟಿ ಕೇಂದ್ರ ಸರ್ಕಾರಕ್ಕೆ ದೊಡ್ಡದಲ್ಲʼ ಎಂದು ಹೇಳಿದ್ದಾರೆ.

ರಾಜ್ಯವಿಧಾನಸಭೆಯಲ್ಲಿ ಶನಿವಾರ ಮಾತನಾಡಿದ ಅವರು,ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರವನ್ನೂ ಬರೆಯಲಾಗಿದ್ದು,ದೇಶದ ಎಲ್ಲ ನಾಗರಿಕರಿಗೂಉಚಿತ ಲಸಿಕೆ ನೀಡಬೇಕು ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಅವರು,ಪಿಎಂ ಕೇರ್ಸ್‌ ಫಂಡ್‌ಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ʼಹೊಸ ಸಂಸತ್ ಭವನ ಮತ್ತು ಪ್ರತಿಮೆ ನಿರ್ಮಿಸಲು 20,000 ಕೋಟಿ ರೂ. ಖರ್ಚು ಮಾಡುತ್ತಿರುವ ಅವರು(ಬಿಜೆಪಿ),ಲಸಿಕೆಗಾಗಿ30,000 ಕೋಟಿ ರೂ. ಖರ್ಚು ಮಾಡಲು ಏಕೆ ಬಿಡುತ್ತಿಲ್ಲ. ಪಿಎಂ ಕೇರ್ಸ್‌ ಫಂಡ್‌ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಪಶ್ಚಿಮ ಬಂಗಾಳವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯು ಸಾಕಷ್ಟು ಹಣ ಖರ್ಚು ಮಾಡಿದೆ ಎಂದೂ ಆರೋಪಿಸಿರುವ ಮಮತಾ,ʼಬಿಜೆಪಿಯು ಬೇರೆಬೇರೆ ರಾಜ್ಯಗಳ ನಾಯಕರು ಮತ್ತು ಕೇಂದ್ರ ಸಚಿವರುಗಳಿಗಾಗಿ ಸಾಕಷ್ಟು ಹೋಟೆಲ್‌ಗಳನ್ನು ಬುಕ್‌ ಮಾಡಿಕೊಂಡಿತ್ತು. ಎಲ್ಲ ಸಚಿವರೂ ಇಲ್ಲಿಗೆ ಬಂದು ಪಿತೂರಿ ನಡೆಸಿದರು. ಯೋಜನೆಗಳು ಮತ್ತು ಹೋಟೆಲ್‌ಗಳಿಗಾಗಿ ಎಷ್ಟು ಕೋಟಿ ಹಣ ಖರ್ಚು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಹಣವನ್ನು ನೀರಿನಂತೆ ಹರಿಸಲಾಯಿತು.ಅದರ ಬದಲು ಅವರು ಲಸಿಕೆ ನೀಡಿದ್ದಿದ್ದರೆ, ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತುʼ ಎಂದು ಗುಡುಗಿದ್ದಾರೆ.

ADVERTISEMENT

ಇದೇ ವೇಳೆ, ಲಸಿಕೆ ಖರೀದಿಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ. ಆದರೆ, ಅವರು ಅನುಮತಿ ನೀಡಿಲ್ಲ. ಇದೀಗ ರಾಜ್ಯವು ಲಸಿಕೆ ಹಾಗು ಆಮ್ಲಜನಕ ಕೊರತೆಯ ಸಂಕಷ್ಟ ಎದುರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.