
ಕೋಲ್ಕತ್ತ: ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಕೋಮು ಸಾಮರಸ್ಯ ಮತ್ತು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿರುವ ಆರೋಪದ ಮೇಲೆ ನರೇಂದ್ರಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕ ಅಮಿತ್ ಮಾಳವೀಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ತನ್ಮಯ್ ಘೋಷ್ ನೀಡಿರುವ ದೂರು ಆಧರಿಸಿ ಮಾಳವೀಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಡಿಸೆಂಬರ್ 19ರಂದು ಮಾಳವೀಯ ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ ವೇದಿಕೆಯಲ್ಲಿ ಪ್ರಚೋದನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ ಎಂದು ತನ್ಮಯ್ ಆರೋಪಿಸಿದ್ದಾರೆ. ಜತೆಗೆ, ದೂರಿನಲ್ಲಿ ನಿರ್ದಿಷ್ಟ ಪೋಸ್ಟ್ ಅನ್ನು ಉಲ್ಲೇಖಿಸಿದ್ದು, ಇದು ಕೋಮು ಸಾಮರಸ್ಯದ ವಿರುದ್ಧ ಔಪಚಾರಿಕ ಪ್ರಚೋದನೆ ಮತ್ತು ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುತ್ತದೆ’ ಎಂದು ಹೇಳಿದ್ದಾರೆ.
‘ಈ ರೀತಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮಾಳವೀಯ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅವಮಾನ ಮಾಡಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಬಿಜೆಪಿ ನಾಯಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಘೋಷ್ ಒತ್ತಾಯಿಸಿದ್ದಾರೆ.
ಮಾಳವೀಯ ಪೋಸ್ಟ್‌ನಲ್ಲಿ ಏನಿತ್ತು?
‘ನಿನ್ನೆ ರಾತ್ರಿ, ಇಸ್ಲಾಮಿಕ್ ಗುಂಪುಗಳು ಬಾಂಗ್ಲಾ ರಾಜಧಾನಿ ಢಾಕಾದಲ್ಲಿರುವ ಐತಿಹಾಸಿಕ ಸಂಸ್ಥೆ ಮತ್ತು ಬಂಗಾಳಿ ಕಲೆ ಮತ್ತು ಸಂಸ್ಕೃತಿಯ ಮೂಲಾಧಾರವಾದ ಛಾಯಾನೌತ್ ಭವನವನ್ನು ಧ್ವಂಸಗೊಳಿಸಿದವು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮಾದರಿಯು ಸ್ಪಷ್ಟವಾಗಿದೆ. ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು ಮತ್ತು ಸಾಂಸ್ಕೃತಿಕ ಕೇಂದ್ರಗಳ ಮೇಲೆ ದಾಳಿಗಳು, ಇಸ್ಲಾಮಿಕ್ ಒತ್ತಡ ಮತ್ತು ಬೆದರಿಕೆಯ ಅಡಿಯಲ್ಲಿ ನಡೆಸಲ್ಪಟ್ಟವು. ಬಾಂಗ್ಲಾದಲ್ಲಿ ನಡೆಯುತ್ತಿರುವ ವಿಧ್ವಂಸಕ ಕೃತ್ಯವು ಒಂದು ಎಚ್ಚರಿಕೆ ಗಂಟೆಯಾಗಿದೆ’ ಎಂದು ಅಮಿತ್ ಮಾಳವೀಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು.
‘ಬಾಂಗ್ಲಾದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಪಶ್ಚಿಮ ಬಂಗಾಳದ ಸರ್ಕಾರವು ತೀವ್ರವಾಗಿ ಚಿಂತೆಗೀಡಾಗಿದೆ. ಬ್ಯಾನರ್ಜಿ ಅವರ ಶಿಥಿಲ ಆಡಳಿತವು 2026ರ ನಂತರವೂ ಮುಂದುವರಿದರೆ, ಬಂಗಾಳದ ಪರಿಸ್ಥಿತಿಯನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಗುಂಪುಗಳು ಆಳ್ವಿಕೆ ನಡೆಸುವ ರಾಜ್ಯದಲ್ಲಿ ಸಂಸ್ಕೃತಿ, ಮುಕ್ತ ಅಭಿವ್ಯಕ್ತಿ ಮತ್ತು ಪ್ರಜಾಪ್ರಭುತ್ವ ಉಳಿಯಲು ಸಾಧ್ಯವಿಲ್ಲ’ ಎಂದೂ ಮಾಳವೀಯ ಗುಡುಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.