
ಸಿಂಗೂರ್: ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿಸಿ ಒಟ್ಟು ₹830 ಕೋಟಿ ವೆಚ್ಚದ ವಿವಿಧ ಕಾರ್ಯಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಚಾಲನೆ ನೀಡಿದರು.
ಹೂಗ್ಲಿ ಜಿಲ್ಲೆಯ ಸಿಂಗೂರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಅಭಿವೃದ್ಧಿಯ ವೇಗಕ್ಕೆ ಕೇಂದ್ರದ ಎಲ್ಲಾ ಯೋಜನೆಗಳು ಸಹಕಾರಿಯಾಗಲಿವೆ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಕಾರಗೊಳಿಸಲು ಮತ್ತಷ್ಟು ಕೆಲಸಗಳು ವೇಗ ಪಡೆಯಲಿವೆ ಎಂದು ಹೇಳಿದ್ದಾರೆ.
ಕೋಲ್ಕತ್ತದಿಂದ ನವದೆಹಲಿ, ವಾರಾಣಸಿ ಮತ್ತು ಚೆನ್ನೈಗೆ ಸಂಪರ್ಕ ಬೆಸೆಯುವ ಅಮೃತ್ ಭಾರತ್ ರೈಲುಗಳಿಗೆ ಮೋದಿ ಹಸಿರು ನಿಶಾನೆ ತೋರಿಸಿದರು.
ಜಯರಾಂಬಟಿ-ಬರೋಗೋಪಿನಾಥಪುರ-ಮೇನಾಪುರ ರೈಲು ಮಾರ್ಗ ಸೇರಿದಂತೆ ಮೇನಾಪುರ ಮತ್ತು ಜಯರಾಂಬಟಿ ನಡುವಿನ ರೈಲಿಗೆ ಚಾಲನೆ ನೀಡಿದರು.
ಬಾಲಘರ್‌ನಲ್ಲಿ ಒಳನಾಡಿನ ಜಲ ಸಾರಿಗೆ (ಐಡಬ್ಲ್ಯೂಟಿ) ಟರ್ಮಿನಲ್ ಮತ್ತು ಮೇಲ್ಸೇತುವೆ ಕಾಮಗಾರಿ, ಬಂದರು ಅಭಿವೃದ್ಧಿ ವ್ಯವಸ್ಥೆ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಿದರು ಎಂದು ಪಿಎಂಒ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.