ADVERTISEMENT

ಪಶ್ಚಿಮ ಬಂಗಾಳ: ಕೇಂದ್ರ ಸಚಿವರನ್ನೇ ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು

ಪಿಟಿಐ
Published 12 ಸೆಪ್ಟೆಂಬರ್ 2023, 12:46 IST
Last Updated 12 ಸೆಪ್ಟೆಂಬರ್ 2023, 12:46 IST
<div class="paragraphs"><p>ಪಶ್ಚಿಮ ಬಂಗಾಳದ ಬಂಕುಡಾದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ&nbsp;ಸುಭಾಸ್ ಸರ್ಕಾರ್ ಅವರನ್ನು ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು</p></div>

ಪಶ್ಚಿಮ ಬಂಗಾಳದ ಬಂಕುಡಾದ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ಸುಭಾಸ್ ಸರ್ಕಾರ್ ಅವರನ್ನು ಕೂಡಿ ಹಾಕಿದ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದರು

   

ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಎಕ್ಸ್ ಚಿತ್ರ

ಬಂಕುಡಾ: ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ಸುಭಾಸ್ ಸರ್ಕಾರ್ ಅವರನ್ನೇ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲಿ ಕೂಡಿ ಹಾಕಿದ ಘಟನೆ ಮಂಗಳವಾರ ನಡೆದಿದೆ.

ADVERTISEMENT

ಬಂಕುಡಾ ಲೋಕಸಭಾ ಕ್ಷೇತ್ರದ ಸಂಸದರಾದ ಸರ್ಕಾರ್‌, ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಸಚಿವರಾಗಿದ್ದಾರೆ. ಪಕ್ಷದ ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ 1ಕ್ಕೆ ಆಯೋಜನೆಗೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಚಿವರ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಅವರನ್ನು ಪಕ್ಷದ ಕಚೇರಿಯಲ್ಲಿ ಕೂಡಿಹಾಕಿದರು.

ಸರ್ಕಾರ್ ಅವರ ನಡತೆಯನ್ನು ಪಕ್ಷದ ಕಾರ್ಯಕರ್ತ ಮೋಹಿತ್ ಶರ್ಮಾ ಅವರು ತೀವ್ರವಾಗಿ ಟೀಕಿಸಿದ್ದಾರೆ. ‘ಪಕ್ಷದ ಕಾರ್ಯಕರ್ತರಿಗೆ ಸರಿಯಾದ ಮನ್ನಣೆ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ.

‘ನಮ್ಮಲ್ಲೇ ಕೆಲವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ನಮ್ಮ ಈ ಪ್ರತಿಭಟನೆ ಪಕ್ಷ ಉಳಿಸುವ ಸಲುವಾಗಿ ನಡೆದಿದೆ. ಇವರ ಅಸಮರ್ಥತೆಯಿಂದಾಗಿ ಬುಂಕುರಾದ ನಗರಸಭೆಯ ಚುನಾವಣೆಯಲ್ಲಿ ಬಿಜೆಪಿ ಒಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗಿಲ್ಲ. ಪಂಚಾಯತ್ ಚುನಾವಣೆಯಲ್ಲೂ ನಿರೀಕ್ಷಿತ ಮಟ್ಟದಲ್ಲಿ ಪಕ್ಷ ಸಾಧನೆ ಮಾಡಿಲ್ಲ. ಇದು ಅವಮಾನಕರ’ ಎಂದಿದ್ದಾರೆ.

ಘಟನೆಯ ಮಾಹಿತಿ ಪಡೆದ ಬಿಜೆಪಿಯ ಮತ್ತೊಂದು ಗುಂಪು ಸ್ಥಳಕ್ಕೆ ಬಂದು ಬಾಗಿಲು ತೆರೆಯುವಂತೆ ಆಗ್ರಹಿಸಿತು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಸ್ಥಳಕ್ಕೆ ಬಂದ ಪೊಲೀಸರು ಸಚಿವ ಸರ್ಕಾರ್ ಅವರನ್ನು ಸುರಕ್ಷಿತವಾಗಿ ಹೊರಕ್ಕೆ ತಂದರು.

ಪಕ್ಷದ ರಾಜ್ಯ ಘಟಕದ ವಕ್ತಾರ ಸಮಿಕ್ ಭಟ್ಟಾಚಾರ್ಯ ಪ್ರತಿಕ್ರಿಯಿಸಿ, ‘ಇದೊಂದು ದುರದೃಷ್ಟಕರ ಘಟನೆ. ಈ ಘಟನೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಘಟಕದ ಸಂಘಟನೆಯಲ್ಲಿ ಸರ್ಕಾರ್ ಅವರ ಪಾತ್ರವೇನೂ ಇಲ್ಲ. ಆದರೆ ಕೆಲವರ ತಪ್ಪು ಗ್ರಹಿಕೆಯಿಂದ ಅವರ ಮೇಲೆ ಆರೋಪ ಮಾಡಲಾಗಿದೆ’ ಎಂದಿದ್ದಾರೆ.

ಈ ಘಟನೆ ಕುರಿತ ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್, ‘ದಿನದಿಂದ ದಿನಕ್ಕೆ ಬಿಜೆಪಿಯೊಳಗಿನ ಘರ್ಷಣೆ ಹೆಚ್ಚಾಗುತ್ತಿದ್ದು, ಅದು ಈಗ ತುತ್ತತುದಿ ತಲುಪಿದೆ. ದುರ್ಬಲ ಅಡಿಪಾಯ ಹಾಗೂ ಕೆಲವರಿಗೆ ಅನಗತ್ಯ ಮನ್ನಣೆ ನೀಡುತ್ತಿರುವುದು ಇದಕ್ಕೆ ಕಾರಣ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.