
ಕೋಲ್ಕತ್ತ: ಫುಟ್‌ಬಾಲ್ ತಾರೆ ಲಿಯೊನೆಲ್ ಮೆಸ್ಸಿ ಕಾರ್ಯಕ್ರಮದ ವೇಳೆ ದಾಂದಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಟೀಕೆಗಳು ಹೆಚ್ಚಿದ ಬೆನ್ನಲ್ಲೇ, ಪಶ್ಚಿಮ ಬಂಗಾಳದ ಸಚಿವ ಅರೂಪ್ ಬಿಸ್ವಾಸ್ ಅವರು ಮಂಗಳವಾರ ಕ್ರೀಡಾ ಖಾತೆಯ ಜವಾಬ್ದಾರಿಯನ್ನು ತೊರೆದಿದ್ದಾರೆ.
ಕ್ರೀಡಾ ಖಾತೆಯ ಜವಾಬ್ದಾರಿ ಯಿಂದ ತಮ್ಮನ್ನು ಮುಕ್ತಗೊಳಿಸಬೇಕು ಎಂಬ ಅವರ ಮನವಿಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂಗೀಕರಿಸಿದದ್ದಾರೆ.
ಇದಕ್ಕೂ ಮುನ್ನ ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರು, ಬಿಸ್ವಾಸ್ ಅವರ ಪತ್ರದ ಪ್ರತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ‘ನಿಷ್ಪಕ್ಷಪಾತ ತನಿಖೆಗಾಗಿ ಕ್ರೀಡಾ ಇಲಾಖೆಯ ಜವಾಬ್ದಾರಿಯಿಂದ ತಮಗೆ ಬಿಡುಗಡೆ ನೀಡಬೇಕು’ ಎಂದು ಬಿಸ್ವಾಸ್ ಅವರು ಪತ್ರದಲ್ಲಿ ಕೋರಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ, ‘ಕ್ರೀಡಾ ಸಚಿವರ ಉದ್ದೇಶ ಮತ್ತು ಭಾವನೆ ಅರ್ಥವಾಗುತ್ತದೆ. ತನಿಖೆ ಪೂರ್ಣಗೊಳ್ಳುವವರೆಗೆ ಮುಖ್ಯಮಂತ್ರಿಯವರೇ ಕ್ರೀಡಾ ಖಾತೆಯ ಉಸ್ತುವಾರಿಯಾಗಿರಲಿದ್ದಾರೆ’ ಎಂದು ತಿಳಿಸಿದರು.
ಬಿಸ್ವಾಸ್ ಅವರು ಕ್ರೀಡೆ, ಯುವ ಜನ ಕಲ್ಯಾಣ ಮತ್ತು ಇಂಧನ ಖಾತೆಗಳ ಸಚಿವರಾಗಿದ್ದು, ಸದ್ಯ ಕ್ರೀಡಾ ಖಾತೆಯ ಜವಾಬ್ದಾರಿಯಿಂದ ಮಾತ್ರ ದೂರ ಸರಿದಿದ್ದಾರೆ.
‘ಬಿಸ್ವಾಸ್ ಅವರ ನಿರ್ಧಾರ ‘ಮೂರ್ಖತನದ್ದು’. ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಂದ (ಪಿಐಎಲ್) ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ’ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ನೋಟಿಸ್
ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಮಂಗಳವಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಬಿಧಾನ್ನಗರ ಉಪ ಪೊಲೀಸ್ ಕಮಿಷನರ್ ಅನೀಶ್ ಸರ್ಕಾರ್ ಅವರನ್ನು ಅಮಾನತು ಮಾಡಿ, ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಡಿಜಿಪಿ ರಾಜೀವ್ ಕುಮಾರ್ ಅವರಿಗೆ ಶೋಕಾಸ್ ನೋಟಿಸ್ ನೀಡಿ, 24 ತಾಸಿನ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ. ಬಿಧಾನ್ನಗರ ಪೊಲೀಸ್ ಕಮಿಷನರ್ ಮುಕೇಶ್ ಕುಮಾರ್ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ತಿಳಿಸಲಾಗಿದೆ.
ಡಿಸೆಂಬರ್ 13ರಂದು ನಡೆದ ಕಾರ್ಯಕ್ರಮದಲ್ಲಿ ಉಂಟಾದ ಅವ್ಯವಸ್ಥೆ ಕುರಿತು ತನಿಖೆಗೆ ರಚನೆಯಾಗಿದ್ದ ಸಮಿತಿಯ ಶಿಫಾರಸಿನ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.