ADVERTISEMENT

ರಾಮ ಮಂದಿರಕ್ಕಾಗಿ ಕೊಠಾರಿ ಸಹೋದರರು ಮಾಡಿದ ಬಲಿದಾನವನ್ನು ಬಂಗಾಳ ಮರೆಯಬಾರದು: ಯೋಗಿ

ಏಜೆನ್ಸೀಸ್
Published 25 ಮಾರ್ಚ್ 2021, 15:37 IST
Last Updated 25 ಮಾರ್ಚ್ 2021, 15:37 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ನಂದಿಗ್ರಾಮ (ಪಶ್ಚಿಮ ಬಂಗಾಳ): ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿರುವಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು,ರಾಮ ಜನ್ಮಭೂಮಿ ಹೋರಾಟಕ್ಕೂ, ಪಶ್ಚಿಮ ಬಂಗಾಳಕ್ಕೂಸಂಬಂಧವಿದೆ ಎಂದು ಹೇಳಿದ್ದಾರೆ.ಅಯೋಧ್ಯೆಯಲ್ಲಿ ಪವಿತ್ರ ಸ್ಥಳಕ್ಕಾಗಿ ನಡೆದ ಆಂದೋಲನದ ವೇಳೆ ಬಂಗಾಳದʼಕೊಠಾರಿʼ ಸಹೋದರರು ಪ್ರಾಣತ್ಯಾಗ ಮಾಡಿದ್ದರು. ರಾಜ್ಯದ ಜನರು ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಇದನ್ನುನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಪ್ರತಿನಿಧಿಸುವ ನಂದಿಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ಈ ವೇಳೆ ಜೈ ಶ್ರೀರಾಮ್‌ ಘೋಷಣೆಗಳನ್ನು ಕೂಗುತ್ತಿದ್ದವರನ್ನು ಉದ್ದೇಶಿಸಿ ಮಾತನಾಡಿದ ಯೋಗಿ, ʼದೀದಿ (ಮಮತಾ ಬ್ಯಾನರ್ಜಿ) ರಾಮನನ್ನು ವಿರೋಧಿಸುತ್ತಾರೆ. ಅವರು ಈ (ಜೈ ಶ್ರೀರಾಮ್‌) ಘೋಷಣೆಗಳನ್ನು ಕೂಗದಂತೆ ಹೇಳುತ್ತಾರೆ. ನೀವು ಮಮತಾ ದೀದಿಯ ಮಾತುಗಳನ್ನು ಒಪ್ಪುತ್ತೀರಾ?ʼ ಎಂದು ಪ್ರಶ್ನಿಸಿದ್ದಾರೆ.

ADVERTISEMENT

ಮುಂದುವರಿದು, ʼಕೊಠಾರಿ ಸಹೋದರರು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ದೇವಾಲಯ ಆಂದೋಲನದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಬಲಿದಾನದ ಸ್ಮಾರಕ ಅಯೋಧ್ಯೆಯಲ್ಲಿ ಇನ್ನೂ ಇದೆ. ರಾಮ ಮಂದಿರ ನಿರ್ಮಾಣ ಮಾಡುವ ಅವರ ಕನಸು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಕಾರಗೊಳ್ಳುತ್ತಿದೆʼ ಎಂದು ತಿಳಿಸಿದ್ದಾರೆ.

ಶ್ರೀರಾಮನ ವಿಚಾರವಾಗಿ ಮಮತಾ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿದ ಅವರು, ʼದೀದಿಗೆ ಐಐಟಿ ಮತ್ತು ಐಐಎಂಗಳನ್ನು ನಿರ್ಮಿಸುವ ಕಾಳಜಿಲ್ಲ. ʼಜೈ ಶ್ರೀರಾಮ್ʼ ಘೋಷಣೆಗಳನ್ನು ನಿಷೇಧಿಸುವುದು ಹೇಗೆ ಎಂಬುದರತ್ತಲೇ ಅವರ ಸಂಪೂರ್ಣ ಗಮನವಿದೆʼ ಎಂದಿದ್ದಾರೆ.

ಭಗವಾನ್‌ ರಾಮ ಪ್ರತಿಯೊಬ್ಬ ಭಾರತೀಯನಲ್ಲೂ ಅಂತರ್ಗತವಾಗಿದ್ದಾರೆ. ಮಮತಾ ಅವರನ್ನು ಹೊರತುಪಡಿಸಿ ಪ್ರತಿಯೊಬ್ಬ ಭಾರತೀಯರೂ ರಾಮನೊಂದಿಗೆ ಒಡನಾಟ ಹೊಂದಲು ಹೆಮ್ಮೆ ಪಡುತ್ತಾರೆ ಎಂದಿದ್ದಾರೆ. ಹಾಗೆಯೇ, ದೇವಾಲಯ ನಿರ್ಮಾಣಕ್ಕೆ ಉದಾರ ದೇಣಿಗೆ ನೀಡಿರುವ ಬಂಗಾಳದ ಜನರಿಗೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

1990ರಲ್ಲಿಅಯೋಧ್ಯೆಯಲ್ಲಿ ವಿವಾದಿತ ಕಟ್ಟಡದ ಮೇಲೆ ಕೇಸರಿ ಧ್ವಜ ಹಾರಿಸುವಾಗ ಪೊಲೀಸರುಗುಂಡು ಹಾರಿಸಿದ್ದರು. ಈ ವೇಳೆ ಕೊಠಾರಿ ಸಹೋದರರಾದ ರಾಮ್‌ ಮತ್ತು ಶರದ್‌ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.

294 ಸದಸ್ಯ ಬಲದ ಬಂಗಾಳ ವಿಧಾನಸಭೆಗೆ ಮೊದಲ ಹಂತದ ಮತದಾನ ಮಾರ್ಚ್‌27 ರಂದು ಆರಂಭವಾಗಲಿದೆ. 8 ಹಂತಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ಅಂತಿಮಸುತ್ತು ಏಪ್ರಿಲ್‌29ರಂದು ಜರುಗಲಿದೆ. ಮೇ2 ರಂದು ಫಲಿತಾಂಶ ಹೊರಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.