
ಜಮ್ಮುಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ
(ಪಿಟಿಐ ಚಿತ್ರ)
ಶ್ರೀನಗರ: 'ವೈಟ್ ಕಾಲರ್' ಭಯೋತ್ಪಾದಕ ಜಾಲ ಪ್ರಕರಣದಲ್ಲಿ ಹರಿಯಾಣ ಮೂಲದ ಧರ್ಮ ಬೋಧಕನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಫರೀದಾಬಾದ್ ವಿಶ್ವವಿದ್ಯಾಲಯದಿಂದ ಕಾರ್ಯನಿರ್ವಹಿಸುತ್ತಿರುವ ವೈಟ್ ಕಾಲರ್ ಭಯೋತ್ಪಾದಕ ಜಾಲದ ಕುರಿತು ತನಿಖೆ ತೀವ್ರಗೊಳಿಸಲಾಗಿದ್ದು, ಹರಿಯಾಣದ ಮೆವಾತ್ ಮೂಲದ ಧರ್ಮ ಬೋಧಕ ಮೌಲ್ವಿ ಇಶ್ತಿಯಾಕ್‌ನನ್ನು ವಶಕ್ಕೆ ಪಡೆಯಲಾಗಿದೆ.
ಆತ ಫರೀದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದ ಆವರಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಆತನ ಮನೆಯಿಂದಲೇ ಪೊಲೀಸರು 2,500 ಕೆ.ಜಿಗೂ ಹೆಚ್ಚು ಅಮೋನಿಯಂ ನೈಟ್ರೇಟ್, ಪೊಟ್ಯಾಷಿಯಂ ಕ್ಲೋರೆಟ್ ಮತ್ತು ಸಲ್ಫರ್ ವಶಪಡಿಸಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮೌಲ್ವಿ ಇಶ್ತಿಯಾಕ್‌ನನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಬಂಧನಕ್ಕೊಳಗಾಗಲಿರುವ ಒಂಬತ್ತನೇ ಆರೋಪಿ ಎನಿಸಲಿದ್ದಾರೆ.
ನಿಷೇಧಿತ ಜೈಶ್–ಎ–ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಫಜ್ವತ್-ಉಲ್-ಹಿಂದ್‌ನ 'ವೈಟ್ ಕಾಲರ್' ಭಯೋತ್ಪಾದಕ ಜಾಲವನ್ನು ಭೇದಿಸಲು ನವೆಂಬರ್ 10ರಂದು ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಪೊಲೀಸರು ದಾಳಿ ನಡೆಸಿದ್ದರು.
ನವದೆಹಲಿಯ ಕೆಂಪು ಕೋಟೆಯಲ್ಲಿ ಸೋಮವಾರ ಸಂಭವಿಸಿದ್ದ ಕಾರು ಸ್ಫೋಟದಲ್ಲಿ 12 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು. ಈ ಸ್ಫೋಟದಲ್ಲಿ ದಕ್ಷಿಣ ಕಾಶ್ಮೀರದ ಪುಲ್ವಾಮಾದ ವೈದ್ಯ ಡಾ. ಉಮರ್ ನಬಿ (34) ಎಂಬಾತ ಪ್ರಮುಖ ಶಂಕಿತ ಆರೋಪಿಯಾಗಿದ್ದಾನೆ. ಆತ ಫರೀದಾಬಾದ್‌ನಲ್ಲಿ ಪತ್ತೆಯಾದ ಭಯೋತ್ಪಾದಕರ ಜಾಲದೊಂದಿಗೆ ಸಂಪರ್ಕ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.