ADVERTISEMENT

ಅಕ್ರಮ ವಲಸಿಗರನ್ನು ಅಮೃತಸರದಲ್ಲಿಯೇ ಇಳಿಸುತ್ತಿರುವುದು ಏಕೆ: ಪಂಜಾಬ್ CM ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2025, 5:26 IST
Last Updated 15 ಫೆಬ್ರುವರಿ 2025, 5:26 IST
ಭಗವಂತ ಮಾನ್
ಭಗವಂತ ಮಾನ್   

ಚಂಡೀಗಢ: ಅಮೆರಿಕದಿಂದ ಅಕ್ರಮ ವಲಸಿಗರನ್ನು ಕರೆತರುತ್ತಿರುವ ಎರಡನೇ ವಿಮಾನವನ್ನೂ ಅಮೃತಸರದಲ್ಲಿಯೇ ಇಳಿಸಲು ಕೇಂದ್ರ ಸರ್ಕಾರ ಏಕೆ ಕ್ರಮ ತೆಗೆದುಕೊಂಡಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅವರು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಂಜಾಬಿಗಳು ಮಾತ್ರ ಅಕ್ರಮ ವಲಸಿಗರು ಎಂದು ಬಿಂಬಿಸಲು ಅಮೃತಸರವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ. ನಾನು ಇದನ್ನು ಕಟ್ಟುನಿಟ್ಟಾಗಿ ವಿರೋಧಿಸುವುದರ ಜತೆಗೆ ಭಾರತೀಯರನ್ನು ಹೊತ್ತು ಬರುವ ವಿಮಾನದ ಮಾರ್ಗ ಬದಲಾಯಿಸಿ ದೆಹಲಿ, ಗಾಜಿಯಾಬಾದ್ ಅಥವಾ ಅಹಮದಾಬಾದ್‌ನಲ್ಲಿ ಇಳಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮತ್ತು ಕೇಂದ್ರ ಗೃಹ ಸಚಿವಾಲಯವನ್ನು (ಎಂಎಚ್‌ಎ) ಒತ್ತಾಯಿಸುತ್ತೇನೆ’ ಎಂದು ಹೇಳಿದ್ದಾರೆ.

‘ಪಂಜಾಬ್ ಮತ್ತು ಪಂಜಾಬಿಗಳ ಮಾನಹಾನಿ ಮಾಡುವ ಷಡ್ಯಂತ್ರವಿದೆ. ಮೊದಲ ವಿಮಾನ ಅಮೃತಸರದಲ್ಲಿ ಬಂದಿಳಿದಿದೆ. ಈಗ ಎರಡನೇ ವಿಮಾನವು ಅಮೃತಸರದಲ್ಲೇ ಬಂದಿಳಿಯಲಿದೆ. ಅಮೃತಸರದಲ್ಲಿ ಯಾವ ಮಾನದಂಡಗಳ ಆಧಾರದ ಮೇಲೆ ಅಮೆರಿಕದ ವಿಮಾನವನ್ನು ಇಳಿಸಲು ಆಯ್ಕೆ ಮಾಡಲಾಗಿದೆ ಎಂಬುದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ವಿವರಿಸಬೇಕು’ ಎಂದು ಮಾನ್ ಆಗ್ರಹಿಸಿದ್ದಾರೆ.

ADVERTISEMENT

‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ, ಅಮೆರಿಕದ ಅಧಿಕಾರಿಗಳು ನಮ್ಮ ನಾಗರಿಕರಿಗೆ ಸಂಕೋಲೆಗಳನ್ನು ಹಾಕಿ ಗಡೀಪಾರು ಮಾಡಿದ್ದರು. ಇದೇನಾ ಮೋದಿಗೆ ಟ್ರಂಪ್ ಕೊಟ್ಟ ಉಡುಗೊರೆ? ಅಮೃತಸರದಲ್ಲಿ ಅಮೆರಿಕದ ಸೇನಾ ವಿಮಾನಗಳು ಬಂದಿಳಿಯುತ್ತಿದ್ದು, ಪಕ್ಕದಲ್ಲೇ ಶತ್ರು ರಾಷ್ಟ್ರ ಪಾಕಿಸ್ತಾನವಿದೆ. ಲಾಹೋರ್ ಇಲ್ಲಿಂದ ಕೇವಲ 40 ಕಿ.ಮೀ. ದೂರವಿದೆ. ಇದು ಯಾವ ರೀತಿಯ ವಿದೇಶಾಂಗ ನೀತಿ’ ಎಂದು ಮಾನ್ ಟೀಕಿಸಿದ್ದಾರೆ.

ಅಮೃತಸರದ ಬದಲು ದೆಹಲಿ, ಅಹಮದಾಬಾದ್ ಅಥವಾ ಇನ್ನಾವುದೇ ಸ್ಥಳವನ್ನು ಏಕೆ ಆಯ್ಕೆ ಮಾಡಿಕೊಂಡಿಲ್ಲ. ಭಾರತದ ಶತ್ರು ರಾಷ್ಟ್ರವಾದ ಪಾಕಿಸ್ತಾನವು ಅಮೃತಸರದ ಸಮೀಪದಲ್ಲಿದ್ದು, ಅಪಾಯವನ್ನುಂಟು ಮಾಡುತ್ತಿದೆ ಎಂದೂ ಮಾನ್ ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಹಿಂಡನ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಆದೇ ರೀತಿ ಈಗ ಅಮೆರಿಕದಿಂದ ವಾಪಸ್‌ ಆಗುತ್ತಿರುವ ಭಾರತೀಯರನ್ನು ಹಿಂಡನ್‌ನಲ್ಲಿ ಇಳಿಸಬಹುದಿತ್ತು? ಅಮೃತಸರವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅಮೃತಸರದಿಂದ ಅಂತರರಾಷ್ಟ್ರೀಯ ವಿಮಾನಗಳನ್ನು ಕಾರ್ಯನಿರ್ವಹಿಸಲು ಬಿಡಬೇಡಿ... ಅದು ಸೂಕ್ತವಲ್ಲ ಎಂದು ಹೇಳಿಕೊಳ್ಳುವವರು ಈಗ ಅಮೆರಿಕದ ವಿಮಾನಗಳು ಏಕೆ ಬರಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿಗರ ವಿರುದ್ಧ ಮಾನ್ ಕಿಡಿಕಾರಿದ್ದಾರೆ.

ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿರುವ 119 ಭಾರತೀಯರನ್ನು ಹೊತ್ತ ಅಮೆರಿಕದ ಎರಡನೇ ವಿಮಾನವು ಇಂದು (ಶನಿವಾರ) ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ ಎಂದು ಮಾನ್ ತಿಳಿಸಿದ್ದಾರೆ.

ವಿವಿಧ ದೇಶಗಳಿಂದ ಬಂದಿರುವ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರದ ಭಾಗವಾಗಿ ಈ ಪ್ರಕ್ರಿಯೆ ನಡೆಯುತ್ತಿದೆ.

ಕಳೆದ ವಾರ ಮೊದಲ ಹಂತದಲ್ಲಿ 104 ಭಾರತೀಯರನ್ನು ಕಳುಹಿಸಿದ್ದ ಅಮೆರಿಕ, ಈ ಬಾರಿ ಎರಡನೇ ಹಂತದಲ್ಲಿ 119 ಜನರನ್ನು ಭಾರತಕ್ಕೆ ಕಳುಹಿಸುತ್ತಿದೆ. ಹೀಗೆ ಸ್ವದೇಶಕ್ಕೆ ವಾಪಸ್‌ ಆಗುತ್ತಿರುವ 119 ಜನರ ಪೈಕಿ ಪಂಜಾಬ್‌ನ 67, ಹರಿಯಾಣದ 33, ಗುಜರಾತಿನ ಎಂಟು, ಉತ್ತರ ಪ್ರದೇಶದ ಮೂವರು, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ತಲಾ ಇಬ್ಬರು ಹಾಗೂ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ತಲಾ ಒಬ್ಬರು ಇದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಲ್ಲದೆ, ಅಮೆರಿಕವು ಇನ್ನಷ್ಟು ಅಕ್ರಮ ವಲಸಿಗರನ್ನು ಮತ್ತೊಂದು ವಿಮಾನದ ಮೂಲಕ ಇದೇ 16ರಂದು (ಭಾನುವಾರ) ಭಾರತಕ್ಕೆ ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ. ಕಳೆದ ವಾರ 104 ಅಕ್ರಮ ವಲಸಿಗರಿದ್ದ ಅಮೆರಿಕದ ಸೇನಾ ವಿಮಾನವು ಅಮೃತಸರ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.