
ಪ್ರಯಾಗ್‌ರಾಜ್: ಪತ್ನಿ ಉನ್ನತ ವಿದ್ಯಾರ್ಹತೆ ಹೊಂದಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಜೀವನಾಂಶವನ್ನು ನಿರಾಕರಿಸಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯಿಂದ ಜೀವನಾಂಶ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿ ಗರಿಮಾ ಪ್ರಸಾದ್, ಪತಿಯು ತನ್ನ ಪತ್ನಿಯ ವಿದ್ಯಾರ್ಹತೆ ಆಧಾರದ ಮೇಲೆ ಆಕೆಯನ್ನು ಕಾನೂನು ಬಾಧ್ಯತೆಯಿಂದ ತಪ್ಪಿಸಿಕೊಳ್ಳುವಂತೆ ಮಾಡುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಿಆರ್‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಪತಿಯಿಂದ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಬುಲಂದ್‌ಶಹರ್‌ನ ಕುಟುಂಬ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ಮಹಿಳೆ ತನ್ನ ವೃತ್ತಿಪರ ಶಿಕ್ಷಣವನ್ನು ನ್ಯಾಯಾಲಯದಿಂದ ಮರೆಮಾಚಿದ್ದರು. ಹಾಗೆಯೇ ಮಹಿಳೆ ಸಮರ್ಥವಾದ ಕಾರಣವಿಲ್ಲದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 9ರ ಅಡಿಯಲ್ಲಿ ವಿಚಾರಣೆಯ ಹೊರತಾಗಿಯೂ ಅವರು ಗಂಡನ ಮನೆಗೆ ಮರಳಲು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಕುಟುಂಬ ನ್ಯಾಯಾಲಯವು ಜೀವನಾಂಶ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತ್ತು.
ಅರ್ಜಿ ಸಲ್ಲಿಸಿದ ದಿನಾಂಕದಿಂದ ಅಪ್ರಾಪ್ತ ಮಗನಿಗೆ ತಿಂಗಳಿಗೆ ₹3,000 ಪಾವತಿಸಬೇಕೆಂದು ಕೌಟುಂಬಿಕ ನ್ಯಾಯಾಲಯ ನಿರ್ದೇಶಿಸಿತ್ತು. ಇದನ್ನು ಪರಿಶೀಲಿಸಿದ ಅಲಹಾಬಾದ್ ಹೈಕೋರ್ಟ್ ವಿದ್ಯಾಭ್ಯಾಸ ಹಾಗೂ ಉತ್ತಮ ವಾತಾವರಣದಲ್ಲಿ ಮಗು ಬೆಳೆಯಲು ಈ ಮೊತ್ತ 'ಅತ್ಯಲ್ಪ' ಎಂದು ಅಭಿಪ್ರಾಯಪಟ್ಟಿದೆ.
ಒಂದು ತಿಂಗಳಲ್ಲಿ ಹೊಸ ಹಾಗೂ ಸಮಂಜಸವಾದ ಆದೇಶವನ್ನು ಹೊರಡಿಸುವಂತೆ ಹೈಕೋರ್ಟ್ ಈ ಅರ್ಜಿಯನ್ನು ಬುಲಂದ್‌ಶಹರ್‌ನ ಕೌಟುಂಬಿಕ ನ್ಯಾಯಾಲಕ್ಕೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.