ADVERTISEMENT

ರಾಮಮಂದಿರ ನಿರ್ಮಾಣಕ್ಕಾಗಿ 1992ರ ಮಾದರಿಯ ಹೋರಾಟ ಸಂಘಟಿಸಲು ಸಿದ್ಧ: ಆರ್‌ಎಸ್‌ಎಸ್

ಏಜೆನ್ಸೀಸ್
Published 2 ನವೆಂಬರ್ 2018, 10:53 IST
Last Updated 2 ನವೆಂಬರ್ 2018, 10:53 IST
ಒಳ ಚಿತ್ರದಲ್ಲಿ ಆರ್‌ಎಸ್‌ಎಸ್‌ ವಕ್ತಾರ ಭಯ್ಯಾಜಿ ಜೋಷಿ
ಒಳ ಚಿತ್ರದಲ್ಲಿ ಆರ್‌ಎಸ್‌ಎಸ್‌ ವಕ್ತಾರ ಭಯ್ಯಾಜಿ ಜೋಷಿ    

ನವದೆಹಲಿ: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಅಗತ್ಯವೆನಿಸಿದರೆ 1992ರಲ್ಲಿ ನಡೆಸಿದ್ದ ರಥಯಾತ್ರೆ ಮಾದರಿಯ ಹೋರಾಟವನ್ನು ಸಂಘಟಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು(ಆರ್‌ಎಸ್‌ಎಸ್‌) ಸಿದ್ಧವಿದೆ ಎಂದು ಸಂಘದ ವಕ್ತಾರ ಭಯ್ಯಾಜಿ ಜೋಷಿ ಹೇಳಿದ್ದಾರೆ. 

1992ರಲ್ಲಿ ಕರಸೇವಕರು ಬಾಬರಿ ಮಸೀದಿ ದ್ವಂಸ ಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿತ್ತು. ವಿವಾದಾತ್ಮಕ ನಿವೇಶನವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಸಮನಾಗಿ ಹಂಚಿಕೆ ಮಾಡುವಂತೆ ಆದೇಶಿಸಿತ್ತು.

ಈ ತೀರ್ಪನ್ನು ಪ್ರಶ್ನಿಸಿದ್ದ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು. ವಿಚಾರಣೆಯನ್ನು ಸುಪ್ರೀಂ 2019ರ ಜನವರಿಗೆ ಮುಂದೂಡಿದೆ.

ADVERTISEMENT

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಲು ಸುಪ್ರೀಂ ಕೋರ್ಟ್‌ ವಿಳಂಬ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಜೋಷಿ, ‘ಈ ದೀಪಾವಳಿಗೂ ಮುನ್ನ ನಾವು ಸಿಹಿ ಸುದ್ದಿಯನ್ನು ನಿರೀಕ್ಷಿಸಿದ್ದೆವು. ಆದರೆ, ತೀರ್ಪು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಸುಪ್ರೀಂ ಕೋರ್ಟ್‌ ಯಾಕೆ ಈ ವಿಚಾರಕ್ಕೆ ಆದ್ಯತೆ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ.

‘ಹಿಂದೂಗಳ ಭಾವನೆಗಳನ್ನು ಅವಮಾನಿಸುವ ಸಲುವಾಗಿ ತನ್ನ ಆದ್ಯತಾ ವಿಷಯಗಳು ವಿಭಿನ್ನವಾಗಿವೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕೋಟ್ಯಂತರ ಹಿಂದೂಗಳ ಭಾವನೆಯು ನ್ಯಾಯಾಲಯಕ್ಕೆ ಆದ್ಯತೆಯ ವಿಷಯವಲ್ಲ ಎನ್ನವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ’ ಜೋಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕಾಗಿ ಹೊಸ ಕಾನೂನು ಜಾರಿಗೊಳಿಸುವಂತೆ ನರೇಂದ್ರ ಮೋದಿ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದೂ ಆವರು ಹೇಳಿದ್ದಾರೆ.

***

ಏನದು 1992ರ ಹೋರಾಟ

ಆರ್‌ಎಸ್‌ಎಸ್‌, ಬಿಜೆಪಿಯ ಹಿರಿಯ ನಾಯಕ ಎಲ್‌.ಕೆ. ಅಡ್ವಾನಿ ಅವರ ನೇತೃತ್ವದಲ್ಲಿ 1992ರಲ್ಲಿ ದೇಶವ್ಯಾಪಿ ರಥಯಾತ್ರೆ ಕೈಗೊಂಡಿತ್ತು. ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರವಿದ್ದ ಪ್ರದೇಶದಲ್ಲಿ 15ನೇ ಶತಮಾನದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ. ಹೀಗಾಗಿ ಅಲ್ಲಿ ಮತ್ತೆ ರಾಮ ಮಂದಿರವನ್ನು ನಿರ್ಮಿಸಬೇಕು ಎಂದು ಕೇಳಿ ಬರುತ್ತಿದ್ದ ಕೂಗು ಈ ಯಾತ್ರೆಯ ವೇಳೆ ಪ್ರತಿಭಟನೆಯ ರೂಪ ಪಡೆದಿತ್ತು.

ಪ್ರತಿಭಟನೆ ಸಂದರ್ಭದಲ್ಲಿ ಕರಸೇವಕರು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ್ದರು. ಚಳುವಳಿಯು ಕೋಮು ಗಲಭೆಯಾಗಿ ಬದಲಾಗಿತ್ತು. ಅದರ ಬಿಸಿ ದೇಶದ ತುಂಬಾ ಹಬ್ಬಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.