ADVERTISEMENT

ಮುಂಚಿತವಾಗಿ ನೋಟಿಸ್ ನೀಡದೆ ವಾಂಖೆಡೆಯನ್ನು ಬಂಧಿಸುವುದಿಲ್ಲ: ಮಹಾರಾಷ್ಟ್ರ ಸರ್ಕಾರ

ಪಿಟಿಐ
Published 28 ಅಕ್ಟೋಬರ್ 2021, 11:16 IST
Last Updated 28 ಅಕ್ಟೋಬರ್ 2021, 11:16 IST
ಸಮೀರ್ ವಾಂಖೆಡೆ
ಸಮೀರ್ ವಾಂಖೆಡೆ    

ಮುಂಬೈ: ಆರ್ಯನ್ ಖಾನ್ ಆರೋಪಿಯಾಗಿರುವ ಡ್ರಗ್ಸ್ ಪ್ರಕರಣ ಮತ್ತು ಇತರೆ ಪ್ರಕರಣಗಳಲ್ಲಿ ತಮ್ಮ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಸಂಬಂಧಿಸಿದಂತೆ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರಿಗೆ ಮೂರು ದಿನಗಳ ಮುಂಚಿತವಾಗಿ ನೋಟಿಸ್ ನೀಡದೆ ಬಂಧಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಬಂಧನದಿಂದ ಮಧ್ಯಂತರ ರಕ್ಷಣೆ ಅಥವಾ ಅವರ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ಕೈಗೊಳ್ಳದಂತೆ ಆದೇಶ ನೀಡಬೇಕೆಂದು ಕೋರಿ ವಾಂಖೆಡೆ ಗುರುವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ ನಂತರ, ತಮ್ಮ ವಿರುದ್ಧದ ಸುಲಿಗೆ ಮತ್ತು ಭ್ರಷ್ಟಾಚಾರದ ಆರೋಪಗಳ ತನಿಖೆಗೆ ನಾಲ್ಕು ಸದಸ್ಯರ ತಂಡವನ್ನು ರಚಿಸಿದ ಮುಂಬೈ ಪೊಲೀಸರ ನಿರ್ಧಾರವನ್ನು ಪ್ರಶ್ನಿಸಿ ತಾವು ಸಲ್ಲಿಸಿದ ಅರ್ಜಿಯ ತುರ್ತು ವಿಚಾರಣೆಗಾಗಿ ವಾಂಖೆಡೆ ಕೋರಿದರು. .

ADVERTISEMENT

ವಾಂಖೆಡೆ ಅರ್ಜಿಗೆ ಮೊದಲು ಮಹಾರಾಷ್ಟ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತು. ಬಳಿಕ, ಮುಖ್ಯ ಪಬ್ಲಿಕ್ ಪ್ರಾಸಿಕ್ಯೂಟರ್ ಅರುಣಾ ಪೈ ಅವರು ವಾಂಖೆಡೆಗೆ ಬಂಧನ ಪೂರ್ವದಲ್ಲಿ ನೋಟಿಸ್ ಮೂಲಕ ಸೂಚನೆ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.

ಮುಂಬೈ ಪೊಲೀಸರು ಬಂಧಿಸುವ ಮೊದಲು (ವಾಂಖೆಡೆಗೆ) ಮೂರು ದಿನಗಳ ನೋಟಿಸ್ ನೀಡುತ್ತಾರೆ ಎಂದು ನಾವು ನ್ಯಾಯಾಲಯಕ್ಕೆ ಭರವಸೆ ನೀಡುತ್ತೇವೆ ಎಂದು ಪೈ ಹೇಳಿದರು. ರಾಜ್ಯ ಸರ್ಕಾರದ ಹೇಳಿಕೆ ಆಲಿಸಿದ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.