ರೈಲು ನಿಲ್ದಾಣ
Credit: iStock Photo
ಪಾಲ್ಘರ್: ಮಹಾರಾಷ್ಟ್ರದ ಮೀರಾ ರಸ್ತೆ ರೈಲು ನಿಲ್ದಾಣದ ಬಳಿಯ ಹಳಿಗಳ ಮೇಲೆ ಮರದ ಪೆಟ್ಟಿಗೆಗಳು ಪತ್ತೆಯಾಗಿವೆ. ವಿಧ್ವಂಸಕ ಕೃತ್ಯದ ಶಂಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ರಾತ್ರಿ 9ರ ಸುಮಾರಿಗೆ ಮೀರಾ ರಸ್ತೆ ಮತ್ತು ಭಯಂದರ್ ರೈಲು ನಿಲ್ದಾಣಗಳ ನಡುವಿನ ಮುಂಬೈಗೆ ಹೋಗುವ ಫಾಸ್ಟ್ ಟ್ರ್ಯಾಕ್‌ನಲ್ಲಿ ಎರಡು ಮರದ ಪೆಟ್ಟಿಗೆಗಳನ್ನು ಹಳಿ ಪರಿಶೀಲನಾ ತಂಡವು ಪತ್ತೆಹಚ್ಚಿದೆ ಎಂದು ಆಧಿಕಾರಿಗಳು ಹೇಳಿದ್ದಾರೆ.
ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125(a), 126(2), 329(3) ಮತ್ತು ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 152ರ ಅಡಿಯಲ್ಲಿ (ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಉದ್ದೇಶದಿಂದ ದುರುದ್ದೇಶಪೂರಿತ ಕೃತ್ಯಗಳನ್ನು ಎಸಗುವುದು) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಿಡಿಗೇಡಿಗಳು ರೈಲು ಹಳಿ ತಪ್ಪಿಸಲು ಅಥವಾ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು ಮಾಡುವ ಉದ್ದೇಶದಿಂದ ಹಳಿಯ ಮೇಲೆ ಮರದ ಪೆಟ್ಟಿಗೆಗಳನ್ನು ಇಟ್ಟಿದ್ದಾರೆ ಎಂದು ಮೀರಾ ರಸ್ತೆಯ ಸ್ಟೇಷನ್ ಮಾಸ್ಟರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಘಟನೆಯು ವಿಧ್ವಂಸಕ ಕೃತ್ಯದಂತೆ ಕಂಡುಬಂದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹಿರಿಯ ಜಿಆರ್‌ಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.