ADVERTISEMENT

ಮಗಳಿಗಾಗಿ 36 ವರ್ಷಗಳಿಂದ ‘ಅವನಾಗಿದ್ದ ಅವಳು’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 9:02 IST
Last Updated 1 ಜನವರಿ 2026, 9:02 IST
<div class="paragraphs"><p>ಪೆಟ್ಚಿಯಮ್ಮಾಳ್,ಮುತ್ತು</p></div>

ಪೆಟ್ಚಿಯಮ್ಮಾಳ್,ಮುತ್ತು

   

ಚಿತ್ರ ಕೃಪೆ: TNIE

ತನ್ನ ಮಗಳ ರಕ್ಷಣೆಗಾಗಿ 36 ವರ್ಷ ಪುರುಷರ ವೇಷ ಧರಿಸಿದ ಅಮ್ಮನ ಕಥೆ ನಿಜಕ್ಕೂ ರೋಚಕವಾಗಿದೆ. ತಾಯಿಯಾದವರು ತನ್ನ ಮಕ್ಕಳ ಏಳಿಗೆಗಾಗಿ ಎಂತಹ ನಿರ್ಧಾರಗಳನ್ನಾದರೂ ತೆಗೆದುಕೊಳ್ಳುತ್ತಾರೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ತಮಿಳುನಾಡಿನ ಗ್ರಾಮವೊಂದರಲ್ಲಿ ತನ್ನ ಮಗಳ ಸುರಕ್ಷತೆಗಾಗಿ ತೆಗೆದುಕೊಂಡ ನಿರ್ಧಾರ ಜನರ ಮೆಚ್ಚುಗೆಗೆ ಕಾರಣವಾಗಿದೆ.

ADVERTISEMENT

ತಮಿಳುನಾಡಿನ ತೂತುಕುಡಿಯ ಕಟ್ಟುನಾಯಕನ್‌ಪಟ್ಟಿ ಗ್ರಾಮದ ಪಿತೃ ಪ್ರಧಾನ ಕುಟುಂಬವೊಂದರಲ್ಲಿ ಜನಿಸಿದ ಮಗಳ ರಕ್ಷಣೆಗಾಗಿ ಪೆಚ್ಚಿಯಮ್ಮಾಳ್ ಎಂಬ ಮಹಿಳೆ ಪುರುಷನ ವೇಷ ಧರಿಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.  

ಪ್ರಸ್ತುತ 57 ವರ್ಷ ಪೆಚ್ಚಿಯಮ್ಮಾಳ್ ಅವರು ಮದುವೆಯಾದ 15 ದಿನಗಳಲ್ಲಿ ಪತಿಯನ್ನು ಕಳೆದುಕೊಳ್ಳುತ್ತಾರೆ. ಪತಿಯನ್ನು ಕಳೆದುಕೊಂಡಾದ ಪೆಚ್ಚಿಯಮ್ಮಾಳ್ ಅವರಿಗೆ ಕೇವಲ 20 ವರ್ಷ ವಯಸ್ಸು. ಇದಾದ ಬಳಿಕ ಅವರು ಷಣ್ಮುಗಸುಂದರಿಗೆ ಜನ್ಮ ನೀಡಿದರು. 

ಗಂಡನನ್ನು ಕಳೆದುಕೊಂಡ ಪೆಚ್ಚಿಯಮ್ಮಾಳ್ ಅವರು ಆರಂಭದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದರು. ಅವರ ಕುಟುಂಬ ವಾಸವಿದ್ದ ಸ್ಥಳದಲ್ಲಿ ಪುರುಷರ ಪ್ರಾಬಲ್ಯ ಹೆಚ್ಚಿತ್ತು. ಇದರಿಂದಾಗಿ ಒಬ್ಬೊಂಟಿಯಾದ ಪೆಚ್ಚಿಯಮ್ಮಾಳ್ ಪುರುಷರಿಂದ ನಿಂದನೆ, ಕಿರುಕುಳ ಹಾಗೂ ಲೈಂಗಿಕ ದೌಜನ್ಯದಂತಹ ಕಷ್ಟಗಳನ್ನು ಎದುರಿಸಬೇಕಾಯಿತು. ಈ ಎಲ್ಲಾ ಕೆಟ್ಟ ವ್ಯವಸ್ಥೆಯಿಂದ ತನ್ನ ಮಗಳನ್ನು ರಕ್ಷಿಸಲು ಪುರುಷನಾಗುವ ನಿರ್ಧಾರವನ್ನು ತೆಗೆದುಕೊಂಡ ಪೆಚ್ಚಿಯಮ್ಮಾಳ್ ಪಂಚೆ, ಶಾರ್ಟ್‌ ಧರಿಸಿ ತನ್ನ ಹೆಸರನ್ನು ‘ಮುತ್ತು’ ಎಂದು ಮರುನಾಮಕರಣ ಮಾಡಿಕೊಂಡರು. 

ಅಂದಿನಿಂದ ಪೆಚ್ಚಿಯಮ್ಮಾಳ್ ಅವರು ಮುತ್ತು ಎಂಬ ಹೆಸರಿನಲ್ಲಿ 36 ವರ್ಷಗಳ ಕಾಲ ಪುರುಷನ ವೇಷದಲ್ಲಿಯೇ ಇದ್ದರು. ’ನಾವು 20 ವರ್ಷಗಳ ಹಿಂದೆ ಕಟ್ಟುನಾಯಕನಪಟ್ಟಿಯಲ್ಲಿ ಪುನರ್ವಸತಿ ಮಾಡಿಕೊಂಡೆವು. ನನ್ನ ಹತ್ತಿರದ ಸಂಬಂಧಿಗಳು ಮತ್ತು ನನ್ನ ಮಗಳಿಗೆ ಮಾತ್ರ ನಾನು ಒಬ್ಬ ಮಹಿಳೆ ಎಂಬುದು ತಿಳಿದಿತ್ತು’ ಎಂದು ಮಾಧ್ಯವೊಂದರ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. 

ಪೆಚ್ಚಿಯಮ್ಮಾಳ್ ಮಗಳಾದ ಷಣ್ಮುಗಸುಂದರಿ ಈಗ ಮದುವೆಯಾಗಿದ್ದಾರೆ. ಅವರ ಕುಟುಂಬವು ಆರ್ಥಿಕವಾಗಿ ಉತ್ತಮವಾಗಿದೆ. ಆದರೆ ಪೆಚ್ಚಿಯಮ್ಮಾಳ್ 36 ವರ್ಷಗಳಿಂದೆ ಧರಿಸಿದ ಉಡುಪು ಬದಲಾಯಿಸಲು ಈಗಾಲೂ ಸಿದ್ಧರಿಲ್ಲ. ಅವರ ಅಂದು ತೆಗೆದುಕೊಂಡ ನಿರ್ಧಾರ ಇಂದು ಅವರ ಗುರುತಾಗಿ ಮಾರ್ಪಟ್ಟಿದೆ. ’ನಾನು ಮುತ್ತು ಆಗಿಯೇ ಮುಂದುವರೆಯುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.