ರಾಹುಲ್ ಗಾಂಧಿ
– ಪಿಟಿಐ ಚಿತ್ರ
ನವದೆಹಲಿ: ‘ಜಗತ್ತು ಹೊಸ ಇಂಧನ ವ್ಯವಸ್ಥೆಗೆ ಬದಲಾಗುತ್ತಿದ್ದು, ಎಲೆಕ್ಟ್ರಿಕ್ ಮೋಟರ್ಸ್, ಬ್ಯಾಟರಿಗಳು ಮತ್ತು ಆಪ್ಟಿಕ್ಸ್ ಅತ್ಯಂತ ನಿರ್ಣಾಯಕ ತಂತ್ರಜ್ಞಾನಗಳಾಗಿವೆ. ಆದರೆ, ಭಾರತವು ರಿಲಯನ್ಸ್ ಮತ್ತು ಅದಾನಿಗಳಂತಹ ಏಕಸ್ವಾಮ್ಯದಿಂದ ಹಳತಾದ ಆರ್ಥಿಕತೆಯಲ್ಲಿ ಸಿಲುಕಿಕೊಂಡಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಡುಗಿದ್ದಾರೆ.
‘ಅಧಿಕಾರ ಎಂಬುದು ಕೆಲವೇ ಕೆಲವು ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗಿದ್ದಾಗ... ವ್ಯವಹಾರದಲ್ಲಾಗಲಿ ಅಥವಾ ಸರ್ಕಾರವಾಗಲಿ ಅದು ಎಲ್ಲವನ್ನೂ ನಿಯಂತ್ರಿಸುತ್ತಿರುತ್ತದೆ’ ಎಂದು ರಾಹುಲ್ ಹೇಳಿದ್ದಾರೆ.
‘ನಾನು ಲೋಕಸಭೆಯ ಭಾಷಣದಲ್ಲಿ ಹೇಳಿದಂತೆ ಚಲನಶೀಲತೆಯು ಭವಿಷ್ಯದಲ್ಲಿ ಎಲ್ಲವನ್ನೂ ಬದಲಾಯಿಸುತ್ತದೆ. ಇತ್ತೀಚೆಗೆ ನಾನು ನಾಗಾಲ್ಯಾಂಡ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಹೊಸ ಕ್ರಾಂತಿಯಲ್ಲಿ ವಾಹನಗಳು ಹೇಗೆ ಬದಲಾಗುತ್ತವೆ ಎಂಬುದನ್ನು ತಿಳಿದುಕೊಂಡೆ’ ಎಂದು ಅವರು ತಿಳಿಸಿದ್ದಾರೆ.
‘ನಮ್ಮ ಶಿಕ್ಷಣ ವ್ಯವಸ್ಥೆಯು ಪ್ರಪಂಚದಲ್ಲಿ ನಡೆಯುತ್ತಿರುವ ಹೊಸ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಮತ್ತು ನಮ್ಮ ದೇಶವನ್ನು ಅಭಿವೃದ್ಧಿಗೊಳಿಸಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನದೊಂದಿಗೆ ಯುವ ಭಾರತೀಯರನ್ನು ಸಜ್ಜುಗೊಳಿಸುವುದು ಅನಿವಾರ್ಯವಾಗಿದೆ’ ಎಂದಿದ್ದಾರೆ.
‘ನಮ್ಮ ನೀತಿಗಳು ಇನ್ನೂ ಪಳೆಯುಳಿಕೆ ಇಂಧನಗಳ ಪರವಾಗಿವೆ. ಆದರೆ, ಚೀನಾ ಮತ್ತು ಅಮೆರಿಕದಂತಹ ರಾಷ್ಟ್ರಗಳು ಎಲೆಕ್ಟ್ರಿಕ್ ಮೋಟರ್ಸ್, ತಂತ್ರಜ್ಞಾನ, ಎಐ ಕ್ಷೇತ್ರಗಳಲ್ಲಿ ಹೆಚ್ಚು ಪ್ರಭಾವಶಾಲಿಯಾಗಿವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.