ದೆಹಲಿಯಲ್ಲಿ ಯಮುನಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದೆ
–ಪಿಟಿಐ ಚಿತ್ರ
ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮುವಿನಲ್ಲಿ ಮಳೆ ಮುಂದುವರಿದಿದೆ. ಪಂಜಾಬ್‌ನಲ್ಲಿ ಸತಲುಜ್ ನದಿಗೆ ಕಟ್ಟಲಾಗಿರುವ ಬಾಕ್ರಾ ಅಣೆಕಟ್ಟು ತುಂಬಲು ಕೆಲವೇ ಅಡಿಗಳಿವೆ. ಬಿಯಾಸ್ ನದಿಗೆ ಕಟ್ಟಲಾಗಿರುವ ಪೊಂಗ್ ಅಣೆಕಟ್ಟಿನಲ್ಲಿ ಗರಿಷ್ಠ ಸಾಮರ್ಥ್ಯ ಮೀರಿ ನೀರು ತುಂಬಿದೆ. ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಈ ನದಿಗಳಿಗೆ ಅಂಟಿಕೊಂಡಿರುವ ಗ್ರಾಮಗಳು, ತಗ್ಗು ಪ್ರದೇಶಗಳ ಜನರಿಗೆ ಆಡಳಿತ ಸೂಚಿಸಿದೆ. ಇನ್ನೊಂದೆಡೆ, ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ನಿರಾಶ್ರಿತ ಶಿಬಿರಗಳಿಗೂ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮುಂದುವರಿದಿದೆ. ಈ ಎಲ್ಲ ಕಡೆಗಳಲ್ಲಿಯೂ ರಕ್ಷಣಾ ಕಾರ್ಯ, ಪರಿಹಾರ ಕಾರ್ಯವನ್ನು ಮುಂದುವರಿಸಲಾಗಿದೆ. ‘ಮುಂದಿನ 3–4 ದಿನಗಳಲ್ಲಿ ಗುಜರಾತ್, ಮಧ್ಯ ಪ್ರದೇಶ ಮತ್ತು ರಾಜಸ್ಥಾನದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸತಲುಜ್, ರಾವಿ ಮತ್ತು ಬಿಯಾಸ್ ನದಿಗಳು ಉಕ್ಕಿ ಹರಿಯುತ್ತಿವೆ. ಈ ಕಾರಣದಿಂದ ಪಂಜಾಬ್‌ನ ಎಲ್ಲ 23 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಇದರೊಂದಿಗೆ, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಭಾರಿ ಮಳೆಯಾಗುತ್ತಿದೆ. ಇದು ಕೂಡ ಪಂಜಾಬ್‌ನಲ್ಲಿ ಪ್ರವಾಹ ಉಂಟಾಗಲು ಕಾರಣವಾಗಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಯಮುನಾ ನದಿಯ ನೀರಿನ ಮಟ್ಟವು 207.46 ಮೀಟರ್ ತಲುಪಿದೆ. ಮುಖ್ಯಮಂತ್ರಿ, ಸಂಪುಟದ ಸಚಿವರು ಸೇರಿದಂತೆ ಪ್ರಮುಖ ಅಧಿಕಾರಿಗಳ ಮನೆಗಳಿರುವ ಪ್ರದೇಶಕ್ಕೂ ಪ್ರವಾಹದ ನೀರು ನುಗ್ಗಿದೆ. ವಾಸುದೇವ್ ಘಾಟ್, ನಿಗಮ್‌ಬೋಧ್ ಘಾಟ್ ಒಳಗೂ ನೀರು ಹರಿದಿದೆ. ಮಯೂರ ವಿಹಾರದಲ್ಲಿ ನಿರಾಶ್ರಿತ ಶಿಬಿರಗಳೂ ಪ್ರವಾಹಕ್ಕೆ ತುತ್ತಾಗಿವೆ. ಇಲ್ಲಿನ ಜನರು ಮತ್ತೊಮ್ಮೆ ನಿರಾಶ್ರಿತರಾಗಿದ್ದಾರೆ. ಯಮುನೆಯು ಉಕ್ಕಿ ಹರಿಯುತ್ತಿರುವುದರಿಂದ ದೆಹಲಿಯ ಸಂಚಾರ ವ್ಯವಸ್ಥೆಗೆ ಅಡಚಣೆಯಾಗಿದೆ
ಕುಲ್ಲು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ಕಾರಣ ಎರಡು ಮನೆಗಳು ಕುಸಿದಿವೆ. ಈ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಆರು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ. ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಗಳು ಮುಚ್ಚಿವೆ. ಭೂಕುಸಿತದಿಂದಾಗಿ ರೈಲುಗಳ ಸಂಚಾರದಲ್ಲಿಯೂ ತೊಂದರೆಯಾಗುತ್ತಿದೆ. ಜೂನ್ 20ರಿಂದ ಈಚೆಗೆ ರಾಜ್ಯದಲ್ಲಿ ಒಟ್ಟು 95 ದಿಢೀರ್ ಪ್ರವಾಹ, 45 ಮೇಘಸ್ಫೋಟ, 127 ಪ್ರಮುಖ ಭೂಕುಸಿತದ ಘಟನೆಗಳು ನಡೆದಿವೆ.
343; ಮಳೆ ಸಂಬಂಧಿತ ಘಟನೆಗಳಲ್ಲಿ ಮತ್ತು ರಸ್ತೆ ಅಪಘಾತದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ
43; ಕಾಣೆಯಾದವರ ಸಂಖ್ಯೆ
₹3,690 ಕೋಟಿ; ಮಳೆಯ ಕಾರಣ ರಾಜ್ಯ ಅನುಭವಿಸಿದ ನಷ್ಟ
‘ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಲ್ಲಿ ಭೂಕುಸಿತ ಮತ್ತು ಪ್ರವಾಹದ ಘಟನೆಗಳನ್ನು ನೋಡುತ್ತಿದ್ದೇವೆ. ಪ್ರವಾಹದ ನೀರು ಹರಿಯುವ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಮರದ ದಿಮ್ಮಿಗಳು ಹರಿದುಹೋಗಿದ್ದು ಮಾಧ್ಯಮ ವರದಿಗಳ ಮೂಲಕ ತಿಳಿಯಿತು. ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂದು ಕಾಣುತ್ತಿದೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹೇಳಿದರು.
ಕೇಂದ್ರ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರಿತ್ಯ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಈ ಬಗ್ಗೆ ನೋಟಿಸ್ ನೀಡಿದೆ.
‘ಅಭಿವೃದ್ಧಿ ಮತ್ತು ಪರಿಸರವನ್ನು ಸರಿದೂಗಿಸಿಕೊಂಡು ಹೋಗಬೇಕು’ ಎಂದು ಸಿಜೆಐ ಸೇರಿ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ಪೀಠವು ಅಭಿಪ್ರಾಯಪಟ್ಟಿತು.
ಭಾರಿ ಮಳೆ ಹಾಗೂ ಪ್ರವಾಹದ ಕಾರಣದಿಂದ ಜಮ್ಮು ಮತ್ತು ಪಂಜಾಬ್ ರಾಜ್ಯಗಳಲ್ಲಿರುವ ಭಾರತ–ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಗೆ ಅಳವಡಿಸಲಾಗಿರುವ ಬೇಲಿಗೆ ಹಾನಿಯಾಗಿದೆ. ಪ್ರವಾಹದ ಕಾರಣ ಬಿಎಸ್‌ಎಫ್‌ನ 90 ಪೋಸ್ಟ್‌ಗಳು ಮುಳುಗಿವೆ.
‘ಪಂಜಾಬ್‌ನಲ್ಲಿರುವ 80 ಕಿ.ಮೀ. ಮತ್ತು ಜಮ್ಮುವಿನಲ್ಲಿರುವ 30 ಕಿ.ಮೀ. ದೂರದ ಬೇಲಿಗೆ ಹಾನಿಯಾಗಿದೆ. ಈ ಪ್ರದೇಶಗಳಲ್ಲಿ ಒಂದೋ ಬೇಲಿಯು ಮುಳುಗಿದೆ, ಇಲ್ಲವೇ ಕಿತ್ತು ಬಂದಿದೆ ಅಥವಾ ಡೊಂಕಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಬೇಲಿಯನ್ನು ಸರಿಪಡಿಸುವ ಕಾರ್ಯ ಆರಂಭಗೊಂಡಿದೆ. ಬೇಲಿಗೆ ಹಾನಿಯಾಗಿರುವಲ್ಲಿ ಡ್ರೋನ್ ಮೂಲಕ ಕಣ್ಗಾವಲು ಇರಿಸಲಾಗಿದೆ. ದೊಡ್ಡ ದೊಡ್ಡ ಸರ್ಚ್‌ಲೈಟ್ಸ್‌ಗಳನ್ನು ಅಳವಡಿಸಲಾಗಿದೆ. ಬೋಟ್‌ಗಳ ಮೂಲಕ ಗಸ್ತು ತಿರುಗಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.