
ದೀಪಾ ಭಾಸ್ತಿ
ಸಾಹಿತ್ಯ, ಕಲೆ, ವಿಜ್ಞಾನ, ಸಂಶೋಧನೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆ, ಕಠಿಣ ಪರಿಶ್ರಮ, ನಿಸ್ವಾರ್ಥ ಸೇವೆ ಮತ್ತು ಸಾಮರ್ಥ್ಯದಿಂದ ಈ ವರ್ಷದ ಸಾಧನೆಯ ಶಿಖರವನ್ನೇರಿದ ಪ್ರಮುಖರು ಇವರು
ಶುಭಾಂಶು ಶುಕ್ಲಾ: ಜೂನ್ 25ರಿಂದ ಜುಲೈ 15ರವರೆಗೆ ‘ಆಕ್ಸಿಯಂ–4’ರ ಭಾಗವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಕಳೆದಿದ್ದ ಶುಭಾಂಶು ಅವರು, ಬಾಹ್ಯಾಕಾಶಕ್ಕೆ ತೆರಳಿದ ಎರಡನೇ, ಐಎಸ್‌ಎಸ್‌ಗೆ ತೆರಳಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು
ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ: ಹಿರಿಯ ಕಥೆಗಾರ್ತಿ ಬಾನು ಮುಷ್ತಾಕ್ ಅವರ ಆಯ್ದ ಸಣ್ಣ ಕಥೆಗಳ ಅನುವಾದಿತ ಕೃತಿ ‘ಹಾರ್ಟ್ ಲ್ಯಾಂಪ್’ಗೆ ‘ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ’ ಒಲಿದು ಬಂತು. ಕನ್ನಡಕ್ಕೆ ಬಂದ ಮೊದಲ ‘ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ’ ಇದು. ಕಥಾ ಸಂಕಲನವೊಂದಕ್ಕೆ ಈ ಗೌರವ ಲಭಿಸುತ್ತಿರುವುದು ಕೂಡ ಇದೇ ಮೊದಲು. ಈ ಪ್ರಶಸ್ತಿಗೆ ಭಾಜನರಾದ ಮೊದಲ ಭಾರತೀಯ ಅನುವಾದಕಿ ಎಂಬ ಹಿರಿಮೆಗೆ ಕನ್ನಡದವರೇ ಆದ ದೀಪಾ ಭಾಸ್ತಿ ಪಾತ್ರರಾದರು
ಡಾ. ಜಯಶ್ರೀ ವೆಂಕಟೇಶನ್: ಭಾರತೀಯ ಪರಿಸರ ಕಾರ್ಯಕರ್ತೆಯಾದ ಅವರು ‘ವೆಟ್‌ಲ್ಯಾಂಡ್ ವೈಸ್ ಯೂಸ್’ ವಿಭಾಗದಲ್ಲಿ 2025ರ ವಾರ್ಷಿಕ (ಆರ್ದ್ರಭೂಮಿಗಳ ಸಂರಕ್ಷಣೆಗಾಗಿ) ರಾಮ್ಸರ್ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಎಂಬ ಮನ್ನಣೆ ಗಳಿಸಿದರು
ಮೋಹನ್‌ಲಾಲ್: ಮಲಯಾಳ ಚಿತ್ರರಂಗದ ಹಿರಿಯ ನಟ, 400ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮೋಹನ್‌ಲಾಲ್ ಅವರು ಭಾರತೀಯ ಸಿನಿಮಾ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ’ಗೆ ಆಯ್ಕೆಯಾದರು
ವರ್ಷಾ ದೇಶಪಾಂಡೆ: 2025ರ ವಿಶ್ವಸಂಸ್ಥೆಯ ಜನಸಂಖ್ಯಾ ಪ್ರಶಸ್ತಿಯನ್ನು ಭಾರತದ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ವಕೀಲೆ ವರ್ಷಾ ದೇಶಪಾಂಡೆ ಅವರು ಪಡೆದರು. ಲಿಂಗ ಸಮಾನತೆ, ಸಂತಾನೋತ್ಪತ್ತಿ ಹಕ್ಕುಗಳು ಮತ್ತು ಲಿಂಗ ಆಧಾರಿತ ಗರ್ಭಪಾತಗಳನ್ನು ತಡೆಗಟ್ಟುವಲ್ಲಿ ಅವರು ನಡೆಸಿದ ಹೋರಾಟಕ್ಕಾಗಿ ಈ ಪ್ರಶಸ್ತಿ ಒಲಿಯಿತು. ಜುಲೈ 11 ರಂದು ವಿಶ್ವ ಜನಸಂಖ್ಯಾ ದಿನದಂದು ನ್ಯೂಯಾರ್ಕ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು
ಶೀಲಾ ಗೌಡ: ಅಂತರರಾಷ್ಟ್ರೀಯ ಮಟ್ಟದ ಕಲಾಸಾಧಕರಿಗೆ ಕೊಡಮಾಡುವ ಪ್ರತಿಷ್ಠಿತ ‘ಸ್ಯಾಮ್ ಗಿಲ್ಲಿಯಾಮ್ ಪ್ರಶಸ್ತಿ’ಗೆ ಈ ವರ್ಷ ಕನ್ನಡತಿ ಕಲಾವಿದೆ ಶೀಲಾ ಗೌಡ ಅವರು ಭಾಜನರಾದರು. ದಿಯಾ ಆರ್ಟ್ ಫೌಂಡೇಷನ್ ಮತ್ತು ಸ್ಯಾಮ್ ಗಿಲ್ಲಿಯಾಮ್ ಫೌಂಡೇಷನ್ ಜಂಟಿಯಾಗಿ ಏಪ್ರಿಲ್‌ನಲ್ಲಿ ಈ ಪ್ರಶಸ್ತಿಯ ಘೋಷಣೆ ಮಾಡಿತು. ಪ್ರಶಸ್ತಿಯ ಮೊತ್ತ 75 ಸಾವಿರ ಡಾಲರ್ (ಆಗಿನ ಮೌಲ್ಯ ₹63.49 ಲಕ್ಷ)
ಗೀತಾಂಜಲಿ ಶ್ರೀ: ಬುಕರ್ ಪ್ರಶಸ್ತಿ ಪುರಸ್ಕೃತ ಹಿಂದಿ ಲೇಖಕಿ ಗೀತಾಂಜಲಿ ಶ್ರೀ ಅವರ ಹಿಂದಿ ಸಣ್ಣ ಕಥೆಗಳ ಸಂಗ್ರಹ ‘ಒನ್ಸ್ ಎಲಿಫೆಂಟ್ಸ್ ಲಿವ್ಡ್ ಹಿಯರ್’ ಕೃತಿಯು ಪ್ರತಿಷ್ಠಿತ ‘ಪೆನ್’ ಅನುವಾದ ಪ್ರಶಸ್ತಿಗೆ ಆಯ್ಕೆಯಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.