ADVERTISEMENT

ಬುದ್ಧನ ಪ್ರತಿಮೆ ಧ್ವಂಸ: ತಾಲಿಬಾನಿಗಳಿಗೆ ದೇವರಿಂದಲೇ ಶಿಕ್ಷೆ- ಯೋಗಿ ಆದಿತ್ಯನಾಥ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2021, 13:46 IST
Last Updated 14 ನವೆಂಬರ್ 2021, 13:46 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ: ‘ಆಫ್ಘಾನಿಸ್ತಾನದಲ್ಲಿ ಬುದ್ಧನ ಪ್ರತಿಮೆಯನ್ನು ಧ್ವಂಸಗೊಳಿಸಿದ ತಾಲಿಬಾನಿಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿರುವುದು ದೇವರು ನೀಡಿರುವ ಶಿಕ್ಷೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಹೇಳಿದ್ದಾರೆ.

ಬಿಜೆಪಿ ಆಯೋಜಿಸಿದ್ದ ಸಾಮಾಜಿಕ ಪ್ರತಿನಿಧಿ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ತಾಲಿಬಾನಿಗಳು ಬುದ್ಧನ ಪ್ರತಿಮೆ ನಾಶಪಡಿಸಿದಾಗ ಅವರು ದೇವರಿಂದ ಶಿಕ್ಷಿಸಲ್ಪಡುತ್ತಾರೆ ಎಂದು ನಮಗೆ ಖಚಿತವಾಗಿತ್ತು. ಅವರ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿರುವುದು ಅದೇ ಶಿಕ್ಷೆಯಾಗಿದೆ’ ಎಂದು ಹೇಳಿದರು.

‘ಬುದ್ಧ ಯಾವಾಗಲೂ ಅಹಿಂಸೆಯನ್ನು ಪ್ರತಿಪಾದಿಸುತ್ತಿದ್ದರು. ಅವರ ಸಂದೇಶ ಶಾಂತಿ ಮತ್ತು ಸಹೋದರತ್ವ. ಅಂಥವರ ಪ್ರತಿಮೆಯನ್ನು ನಾಶಪಡಿಸುವುದು, ಅವರ ಸಂದೇಶವನ್ನು ದೂರದವರೆಗೆ ಹರಡುವುದನ್ನು ತಡೆಯುವ ಪಿತೂರಿಯ ಭಾಗವಾಗಿದೆ ಎಂದು ಹೇಳಬಹುದು’ ಎಂದರು.

ADVERTISEMENT

ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ತಾಲಿಬಾನಿಗಳ ನಡುವೆ ಹೋಲಿಕೆಗೆ ಯತ್ನಿಸಿದ ಆದಿತ್ಯನಾಥ, ‘ಮೊಹಮ್ಮದ್ ಅಲಿ ಜಿನ್ನಾ ಅವರನ್ನು ಬೆಂಬಲಿಸುವವರು ವಾಸ್ತವವಾಗಿ ತಾಲಿಬಾನಿಗಳನ್ನು ಬೆಂಬಲಿಸುತ್ತಿದ್ದಾರೆ. ಪ್ರತಿಪಕ್ಷಗಳಿಗೆ ಟೀಕಿಸಲು ಯಾವುದೇ ವಿಷಯ ಇಲ್ಲ. ಅದಕ್ಕಾಗಿಯೇ ಸರ್ದಾರ್ ಪಟೇಲ್ ಅವರನ್ನು ಜಿನ್ನಾ ಅವರಿಗೆ ಹೋಲಿಕೆ ಮಾಡುವ ಮೂಲಕ ಅವಮಾನಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಅಖಿಲೇಶ್ ಅವರು ಕೆಲವು ದಿನಗಳ ಹಿಂದೆ ನಡೆದ ಸಾರ್ವಜನಿಕ ಸಭೆಯಲ್ಲಿ ಜಿನ್ನಾರನ್ನು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್‌ ಅವರಿಗೆ ಹೋಲಿಸಿ ಮಾತನಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.