ವೈಎಸ್‌ಆರ್‌ಸಿಪಿ ಸಂಸದ ವೈ.ಎಸ್. ಅವಿನಾಶ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಮರಾವತಿ: ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಉಪಚುನಾವಣೆ ಆರಂಭವಾಗಿದ್ದು, ಮತದಾನ ಬಿರುಸಿನಿಂದ ನಡೆಯುತ್ತಿದೆ. ಇದರ ಬೆನ್ನಲ್ಲೇ ಸ್ಥಳೀಯ ವೈಎಸ್‌ಆರ್‌ಸಿಪಿ ಸಂಸದ ವೈ.ಎಸ್. ಅವಿನಾಶ್ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ನಾಯಕರೊಬ್ಬರನ್ನು ಗೃಹಬಂಧನದಲ್ಲಿ ಇರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿತ್ತೂರು ಜಿಲ್ಲೆಯ ರಾಮಕುಪ್ಪಂ, ಪಲ್ನಾಡು ಜಿಲ್ಲೆಯ ಕರೆಂಪುಡಿ ಮತ್ತು ನೆಲ್ಲೂರು ಜಿಲ್ಲೆಯ ವಿಡವಲೂರು ಮಂಡಲ ಪರಿಷತ್‌ಗೆ ಚುನಾವಣೆ ನಡೆಯುತ್ತಿದೆ. ಜತೆಗೆ, ಕಡಪ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆ ನಡೆಯುತ್ತಿದೆ.
‘ಇಂದು ಬೆಳಿಗ್ಗೆ ಪುಲಿವೆಂದುಲದಲ್ಲಿ ಸಂಸದ ಅವಿನಾಶ್ ರೆಡ್ಡಿ ಅವರನ್ನು ಬಂಧಿಸುವ ಮೂಲಕ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಯಾವುದೇ ಸೂಚನೆ ಅಥವಾ ಕಾರಣವಿಲ್ಲದೆ ರೆಡ್ಡಿ ಅವರನ್ನು ಬಂಧಿಸಲಾಗಿದೆ’ ಎಂದು ವೈಎಸ್‌ಆರ್‌ಸಿಪಿ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯದಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಾಯಕರು ಪೊಲೀಸರು ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಮತಗಟ್ಟೆ ವಶಪಡಿಸಿಕೊಳ್ಳುವಿಕೆ, ಹಿಂಸಾಚಾರ ಮತ್ತು ಮತದಾರರನ್ನು ಬೆದರಿಸುವ ಕೃತ್ಯಗಳನ್ನು ನಡೆಸಿದ್ದಾರೆ ಎಂದು ವೈಎಸ್‌ಆರ್‌ಸಿಪಿ ದೂರಿದೆ.
ಗೃಹಬಂಧನದಲ್ಲಿ ಇರಿಸಲಾದ ಟಿಡಿಪಿ ಎಂಎಲ್‌ಸಿ ರಾಮ್ ಗೋಪಾಲ್ ರೆಡ್ಡಿ ಅವರು ಕೂಡಾ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.