ಕೃಷ್ಣ ಬೈರೇಗೌಡ
ಸುವರ್ಣ ವಿಧಾನಸೌಧ (ಬೆಳಗಾವಿ): ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5,022 ಆಸ್ತಿಗಳನ್ನು ನೋಂದಣಿ ಮಾಡಿ ಮುಜರಾಯಿ ದೇವಸ್ಥಾನಗಳಿಗೆ ಹಸ್ತಾಂತರ ಮಾಡಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪರ ಉತ್ತರಿಸಿದ ಅವರು, ‘ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಸೇರಿದ ಒಂದು ಸಾವಿರ ಎಕರೆ ಜಮೀನನ್ನು ಒಂದು ತಿಂಗಳ ಒಳಗೆ ಲೆಕ್ಕ ಪರಿಶೋಧನೆ ನಡೆಸಿ ವರದಿ ನೀಡಬೇಕೆಂದು ಸೂಚಿಸಲಾಗಿದೆ. ಸರ್ಕಾರ ವಶಪಡಿಸಿಕೊಂಡ ನಂತರ ದೇವಸ್ಥಾನಕ್ಕೆ ಸಮರ್ಪಣೆ ಮಾಡಲಾಗುವುದು. ದೇವಸ್ಥಾನಕ್ಕೆ ಸೇರಿದ ಆಸ್ತಿ ಅದಕ್ಕೇ ಸೇರಬೇಕು’ ಎಂದರು.
‘ದಾನಿಗಳು ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ 1,198 ಎಕರೆ ಜಮೀನು 1939ರಲ್ಲಿ ದಾನ ಮಾಡಿದ್ದರು. ಮಹಿಳಾ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತಿತರ ಸಾರ್ವಜನಿಕ ಉಪಯೋಗಕ್ಕೆ ಈ ಜಾಗ ಅನುಕೂಲವಾಗಲೆಂದು ನೀಡಲಾಗಿತ್ತು. ಇದರಲ್ಲಿ 198 ಎಕರೆ ಜಮೀನನ್ನು ನಿರಾಶ್ರಿತರಿಗೆ ನೀಡಲಾಗಿದೆ. ಖಾತೆ ಇಲ್ಲದವರಿಗೆ ಖಾತೆ ಮಾಡಿಕೊಡಲಾಗಿದೆ. ನಿಯಮಗಳ ಪ್ರಕಾರ ದೇವಸ್ಥಾನದ ಆಸ್ತಿಯನ್ನು ಯಾರಿಗೂ ಪರಭಾರೆ ಮಾಡಲು ಅವಕಾಶವಿಲ್ಲ’ ಎಂದರು.
‘ಚೋಳನಾಯಕನಹಳ್ಳಿ, ಬ್ಯಾಲಾಳು, ಪೆದ್ದನಪಾಳ್ಯ, ದೊಡ್ಡಮಾರನಹಳ್ಳಿ ಮತ್ತು ಕುರುಬರಹಳ್ಳಿ ಗ್ರಾಮಗಳಲ್ಲಿರುವ ಈ ಜಾಗ ಒತ್ತುವರಿಯಾಗಿದೆ. ನ್ಯಾಯಾಲಯದ ತೀರ್ಪಿನಂತೆ ಕೇವಲ ಮೂರು ತಿಂಗಳಲ್ಲಿ 56 ಎಕರೆ ಜಮೀನನ್ನು ಮತ್ತೆ ವಶಪಡಿಸಿಕೊಳ್ಳಲಾಗಿದೆ. ದೇವಸ್ಥಾನದ ಜಮೀನನ್ನು ಉಳಿಸಿಕೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ’ ಎಂದು ಭರವಸೆ ನೀಡಿದರು.
ಪ್ರಜಾಸೌಧ: ‘ರಾಜ್ಯದಲ್ಲಿನ 49 ಹೊಸ ತಾಲ್ಲೂಕುಗಳಲ್ಲಿ ಮುಂದಿನ ಆರು ತಿಂಗಳ ಒಳಗೆ ಪ್ರಜಾಸೌಧ ನಿರ್ಮಿಸಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಜಗದೇವ್ ಗುತ್ತೇದಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ರಾಜ್ಯದ 65 ಹೊಸ ತಾಲ್ಲೂಕುಗಳ ಪೈಕಿ ಈ ಹಿಂದಿನ ಸರ್ಕಾರದ ಐದು ವರ್ಷಗಳಲ್ಲಿ 14 ಹೊಸ ತಾಲ್ಲೂಕುಗಳಲ್ಲಿ ಹೊಸ ಕಟ್ಟಡ ನಿರ್ಮಿಸಿತ್ತು. ನಮ್ಮ ಸರ್ಕಾರದ ಈಗಾಗಲೇ 27 ಕಟ್ಟಡಗಳನ್ನು ನಿರ್ಮಿಸಿದೆ’ ಎಂದರು.
ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭ: ‘ಸಾರಿಗೆ ಇಲಾಖೆಯಲ್ಲಿ ಒಟ್ಟು 9 ಸಾವಿರ ಸಿಬ್ಬಂದಿ ನೇಮಕಕ್ಕೆ ಅನುಮತಿ ಸಿಕ್ಕಿದ್ದು, ಈ ಪೈಕಿ 4 ಸಾವಿರ ಸಿಬ್ಬಂದಿ ನೇಮಕ ಪ್ರಕ್ರಿಯೆ ಆರಂಭವಾಗಿದೆ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ವಿಧಾನ ಪರಿಷತ್‌ಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಅವರ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರ ಉತ್ತರಿಸಿದ ಲಾಡ್, ‘ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕೆಂಬ ಬೇಡಿಕೆ ಇತ್ತು. 9 ಸಾವಿರ ಸಿಬ್ಬಂದಿ ನೇಮಕಾತಿಗೆ ಅರ್ಥಿಕ ಇಲಾಖೆ ಅನುಮೋದನೆ ನೀಡಿದೆ’ ಎಂದರು.
‘ಶಕ್ತಿ ಯೋಜನೆ ನಂತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಆದಾಯ ಶೇ 41ರಷ್ಟು ವೃದ್ಧಿಸಿದ್ದು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಸಕ್ತ ವರ್ಷ 4,304 ಬಸ್‌ಗಳನ್ನು ಖರೀದಿಸಲಾಗಿದೆ. 2025ರ ಮಾರ್ಚ್ ಒಳಗಾಗಿ ಇನ್ನು 1,346 ಬಸ್‌ಗಳನ್ನು ಖರೀದಿಸಿ ನಾಲ್ಕೂ ನಿಗಮಗಳಿಗೆ ಹಂಚಿಕೆ ಮಾಡಲಾಗುವುದು’ ಎಂದು ತಿಳಿಸಿದರು.
‘ಜವಾನ್ ಸಮ್ಮಾನ್’ ಬಡಾವಣೆ: ‘ಪ್ರತಿ ಜಿಲ್ಲೆಯಲ್ಲಿ ‘ಜವಾನ್ ಸಮ್ಮಾನ್’ ಹೆಸರಿನಲ್ಲಿ ಬಡಾವಣೆಗಳನ್ನು ನಿರ್ಮಿಸಿ ಮಾಜಿ ಸೈನಿಕರಿಗೆ ನಿವೇಶನಗಳನ್ನು ನೀಡಲಾಗುವುದು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಧಾನಪರಿಷತ್‌ನಲ್ಲಿ ಜೆಡಿಎಸ್ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಮಾಜಿ ಸೈನಿಕರಿಗೆ ವ್ಯವಸಾಯ ಉದ್ದೇಶಕ್ಕಾಗಿ 2 ಎಕರೆ ಜಮೀನು ನೀಡಬೇಕೆಂಬ ನಿಯಮವಿದೆ. ಆದರೆ, ನೀಡಲು ಸರ್ಕಾರದ ಬಳಿ ಭೂಮಿ ಇಲ್ಲ. ಹೀಗಾಗಿ, ಈ ಕಾನೂನಿಗೆ ತಿದ್ದುಪಡಿ ತಂದು ಎಲ್ಲರಿಗೂ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಧಿವೇಶನ ಮುಗಿಯುತ್ತಿದ್ದಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಜಾಗ ಗುರುತಿಸಲು ಸೂಚಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.