ADVERTISEMENT

ರಾಜ್ಯದಲ್ಲಿ ಉತ್ತಮ ಮಳೆ: 2 ತಿಂಗಳಲ್ಲಿ ತಮಿಳುನಾಡಿಗೆ 75 ಟಿಎಂಸಿ ಅಡಿ ನೀರು

ಮೆಟ್ಟೂರು ಜಲಾಶಯಕ್ಕೆ ನಿಗದಿಗಿಂತ 40 ಟಿಎಂಸಿ ಅಡಿ ಹೆಚ್ಚುವರಿ ನೀರು ಹರಿವು

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:24 IST
Last Updated 26 ಜುಲೈ 2022, 5:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಜುಲೈನಲ್ಲಿ ಉತ್ತಮ ಮಳೆಯಾದ ಕಾರಣ ಎರಡು ತಿಂಗಳ (ಜೂನ್‌ ಮತ್ತು ಜುಲೈ) ಅವಧಿಯಲ್ಲಿ ಸುಮಾರು 75 ಟಿಎಂಸಿ ಅಡಿಗಳಷ್ಟು ನೀರು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದು ಹೋಗಿದೆ.

ಜೂನ್‌ನಲ್ಲಿ ನಿಗದಿತ ಸಮಯಕ್ಕೆ ಮಳೆ ಬಾರದ ಕಾರಣ ಈ ಬಾರಿ ರಾಜ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇತ್ತು. ಆದರೆ, ಜುಲೈನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದರಿಂದ ತಮಿಳುನಾಡಿಗೆ ಹರಿಸಬೇಕಾದ ಪ್ರಮಾಣಕ್ಕಿಂತ ಹೆಚ್ಚು ನೀರು ಹರಿದು ಹೋಗಿದೆ. ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಜೂನ್‌ ಮತ್ತು ಜುಲೈ ನಲ್ಲಿ ತಮಿಳುನಾಡಿಗೆ 35 ಟಿಎಂಸಿ ಅಡಿ ಗಳಷ್ಟು ನೀರು ಬಿಡಬೇಕು. ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರಿಂದ ಈ ಎರಡು ತಿಂಗಳಲ್ಲಿ 75 ಟಿಎಂಸಿ ಅಡಿಗಳಷ್ಟು ನೀರು ತಮಿಳುನಾಡಿಗೆ ಹರಿದು ಹೋಗಿದೆ. ಆಗಸ್ಟ್‌ನಲ್ಲಿ 50 ಟಿಎಂಸಿ ಅಡಿಯಷ್ಟು ನೀರು ಬಿಡ ಬೇಕು. ಒಂದು ವೇಳೆ ಆಗಸ್ಟ್‌ನಲ್ಲಿ ಮಳೆ ಕಡಿಮೆಯಾದರೂ ಜುಲೈನಲ್ಲಿ ಹೆಚ್ಚು ನೀರು ಬಿಟ್ಟಿರುವುದರಿಂದ ಲೆಕ್ಕಾಚಾರ ಸರಿದೂಗಿಸಿದಂತಾಗುತ್ತದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಕಾವೇರಿ ಜಲಾನಯದ ನಾಲ್ಕು ಜಲಾಶಯಗಳ ನೀರು ಸಂಗ್ರಹದ ಒಟ್ಟು ಸಾಮರ್ಥ್ಯ 114.57 ಟಿಎಂಸಿ ಅಡಿಗಳು ಇದ್ದು, ಸೋಮವಾರ (ಜುಲೈ 25) ಒಟ್ಟು 113.40 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 86.74 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈ ಜಲಾಶಯಗಳಲ್ಲಿ ನೀರಿನ ಒಳಹರಿವು 29,051 ಕ್ಯೂಸೆಕ್‌ ಇದ್ದರೆ, ಹೊರ ಹರಿವು 21,718 ಕ್ಯೂಸೆಕ್‌ಗಳಿವೆ. ಜುಲೈ 1 ರಿಂದ ಇಲ್ಲಿಯವರೆಗೆ ಸಂಚಿತ ಒಳಹರಿವು 161 ಟಿಎಂಸಿ ಅಡಿಗಳು ಮತ್ತು ಇದೇ ಅವಧಿಯಲ್ಲಿ ಸಂಚಿತ ಹೊರ ಹರಿವು 110 ಟಿಎಂಸಿ ಅಡಿಗಳು ಎಂದು ಜಲಸಂಪನ್ಮೂಲ ಇಲಾಖೆಯ ಮೂಲಗಳು ಹೇಳಿವೆ.

ADVERTISEMENT

ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಹಾರಂಗಿಯಲ್ಲಿ 7.91 ಟಿಎಂಸಿ ಅಡಿ, ಹೇಮಾವತಿಯಲ್ಲಿ 37.10 ಟಿಎಂಸಿ ಅಡಿ, ಕೆಆರ್‌ಎಸ್‌ನಲ್ಲಿ 49.28 ಟಿಎಂಸಿ ಅಡಿ ಮತ್ತು ಕಬಿನಿಯಲ್ಲಿ 19.40 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಉತ್ತಮ ಫಸಲು ನಿರೀಕ್ಷೆ: ಕಳೆದ ಕೆಲವು ದಿನಗಳಿಂದ ಮಳೆ ಬಿಡುವು ಕೊಟ್ಟಿರು ವುದರಿಂದ ರೈತರಿಗೆ ಅನುಕೂಲವೇ ಆಗಿದೆ. ಮಳೆ ಮುಂದುವರಿದಿದ್ದರೆ ಕೃಷಿಕರಿಗೆ ಸಂಕಷ್ಟ ಎದುರಾಗುತ್ತಿತ್ತು. ಬೆಳೆಯ ಮೇಲೆ ದುಷ್ಪರಿಣಾಮದ ಸಾಧ್ಯತೆ ಇತ್ತು. ಜೂನ್‌ನಲ್ಲಿ ಕೆಲವು ತಾಲ್ಲೂಕುಗಳಲ್ಲಿ ಮಳೆಯ ಕೊರತೆಯಿಂದ ಬಿತ್ತನೆಗೆ ಯಡವಟ್ಟು ಆಗಿದ್ದು ನಿಜ. ಜುಲೈನಲ್ಲಿ ಸರಿ ಹೋಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.