
ವಿಧಾನಸೌಧ
ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಚಿಸಿರುವ ಬಡಾವಣೆಗಳಲ್ಲಿನ ‘ಬಿ’–ಖಾತಾ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ‘ಎ–ಖಾತಾ’ ಸೌಲಭ್ಯ ಸಿಗಲಿದೆ.
ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ಷರತ್ತಿಗೊಳಪಟ್ಟು ಈ ಎಲ್ಲ ಆಸ್ತಿಗಳಿಗೆ ‘ಎ’–ಖಾತಾ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು, ‘ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961’ ಅನ್ನು ಉಲ್ಲಂಘಿಸಿ ನಿರ್ಮಿಸಿರುವ ಅನಧಿಕೃತ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌ಗಳಲ್ಲಿನ ಫ್ಲಾಟ್‌ಗಳಿಗೆ ಮಾತ್ರ ಖಾತಾ ಪರಿವರ್ತನೆಗೆ ಅವಕಾಶ ನೀಡಲಾಗಿದೆ ಎಂದರು.
ಕಳೆದ ನವೆಂಬರ್‌ನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಖಾತಾ ಪರಿವರ್ತನೆಗೆ ಅವಕಾಶ ನೀಡಲಾಗಿತ್ತು. ಈಗ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೂ ವಿಸ್ತರಿಸಲಾಗಿದೆ. ಸುಮಾರು 10 ಲಕ್ಷ ‘ಬಿ’ ಖಾತಾ ಆಸ್ತಿಗಳಿವೆ. ಜಿಬಿಎ ವ್ಯಾಪ್ತಿಯಲ್ಲಿ ವಿಧಿಸಲಾಗಿದ್ದ ನಿಯಮಗಳನ್ನೇ ಉಳಿದ ಕಡೆಗಳಿಗೂ ಅನ್ವಯಿಸಲಾಗುವುದು. ಒತ್ತುವರಿ ಮತ್ತು ಉಲ್ಲಂಘನೆಯ ಪ್ರಮಾಣಕ್ಕೆ ಅನುಗುಣವಾಗಿ ದಂಡದ ಪ್ರಮಾಣವನ್ನೂ ತೀರ್ಮಾನಿಸಲಾಗುತ್ತದೆ. ಆ ಪ್ರಮಾಣ ಶೇ 5ರಿಂದ ಶೇ 30ರವರೆಗೂ ಆಗಬಹುದು. ಈ ಅಂಶಗಳನ್ನು ನಿಯಮದಲ್ಲಿ ಸ್ಪಷ್ಟಪಡಿಸಲಾಗುವುದು ಎಂದು ಅವರು ಹೇಳಿದರು.
‘ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬೆಳವಣಿಗೆಗಳನ್ನು ನಿಯಂತ್ರಿಸುವುದು ಈ ತೀರ್ಮಾನದ ಮುಖ್ಯ ಉದ್ದೇಶ. ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸಿ ಪರಭಾರೆ ಮಾಡುವುದನ್ನು ಇನ್ನು ಮುಂದೆ ನಿರ್ಬಂಧಿಸಲಾಗುವುದು. ಈಗಾಗಲೇ ಅನಧಿಕೃತವಾಗಿ ರಚಿತವಾಗಿರುವ ಬಡಾವಣೆಗಳನ್ನು ಕಾನೂನು ವ್ಯಾಪ್ತಿಗೆ ತರುವ ಉದ್ದೇಶವೂ ಸರ್ಕಾರದ್ದಾಗಿದೆ’ ಎಂದು ಅವರು ತಿಳಿಸಿದರು.
‘ಜಿಬಿಎ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ‘ಎ’ ಖಾತಾ ಮತ್ತು ‘ಬಿ’ ಖಾತಾ ಹೊಂದಿರುವವರು ಪಾವತಿಸುತ್ತಿರುವ ಆಸ್ತಿ ತೆರಿಗೆ ಪ್ರಮಾಣದಲ್ಲಿ ಭಾರಿ ವ್ಯತ್ಯಾಸವಿದೆ. ‘ಎ’ ಖಾತಾದಾರರು ಹೆಚ್ಚು ತೆರಿಗೆ ಪಾವತಿಸುತ್ತಿದ್ದರೆ, ‘ಬಿ’ ಖಾತಾದಾರರು ಕಡಿಮೆ ತೆರಿಗೆ ಪಾವತಿಸುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಆದಾಯ ಕಡಿಮೆ ಆಗುತ್ತಿದೆ. ಎಲ್ಲರಿಗೂ ‘ಎ’ ಖಾತಾ ನೀಡುವುದರಿಂದ ಸರ್ಕಾರಕ್ಕೆ ಆದಾಯ ಹೆಚ್ಚುತ್ತದೆ. ಆದರೆ, ‘ಎ’ ಖಾತಾ ನೀಡುವುದರಿಂದ ಅನಧಿಕೃತ ಕಟ್ಟಡಗಳನ್ನು ‘ಸಕ್ರಮ’ ಎಂದು ಪರಿಗಣಿಸಲಾಗುವುದಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಬಿ’ ಖಾತಾ ಹೊಂದಿರುವವರು ‘ಎ’ ಖಾತಾ ಪಡೆಯುವುದರಿಂದ ಆಸ್ತಿಯ ಕ್ರಯ–ವಿಕ್ರಯ, ಅಡಮಾನ, ಬ್ಯಾಂಕ್ ಸಾಲ ಸೇರಿ ವಿವಿಧ ಸೌಕರ್ಯಗಳನ್ನು ಪಡೆಯಲು ಸಹಾಯಕವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.