ADVERTISEMENT

ಕುಸಿದ ಮಕ್ಕಳ ಸಂಖ್ಯೆ; 10,500 ಶಿಕ್ಷಕರು ಹೆಚ್ಚುವರಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 13:58 IST
Last Updated 16 ಜನವರಿ 2023, 13:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವರ್ಗಾವಣೆಯ ಹೊಸ ನೀತಿಯ ಅನ್ವಯ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಿದ್ದು, ಮಕ್ಕಳು ಕಡಿಮೆ ಇರುವ ಶಾಲೆಗಳಲ್ಲಿನ 10,500 ಶಿಕ್ಷಕರನ್ನು ’ಹೆಚ್ಚುವರಿ’ ಎಂದು ಶಿಕ್ಷಣ ಇಲಾಖೆ ಪಟ್ಟಿ ಮಾಡಿದೆ.

ಸರ್ಕಾರ ಒಂದರಿಂದ ಐದನೇ ತರಗತಿಯವರೆಗೆ 40 ವಿದ್ಯಾರ್ಥಿಗಳಿಗೆ, ಆರರಿಂದ ಎಂಟನೇ ತರಗತಿಯವರೆಗೆ 35 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಂತೆ ಅನುಪಾತ ನಿಗದಿ ಮಾಡಿದೆ. ಈ ಅನುಪಾತಕ್ಕೆ ಅನುಗುಣವಾಗಿ ರಾಜ್ಯದ ವಿವಿಧ ಶಾಲೆಗಳಲ್ಲಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದ್ದು, ಎರಡು ವರ್ಷಗಳಿಗೆ ಒಮ್ಮೆ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿ, ಅವರನ್ನು ಅಗತ್ಯವಿರುವ ಇತರೆ ಶಾಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಬಾರಿ 10,500 ಶಿಕ್ಷಕರು ಹೆಚ್ಚುವರಿಯಾಗಿದ್ದು, ವರ್ಗಾವಣೆಗೂ ಮೊದಲು ಅವರಿಗೆ ಸ್ಥಳ ನಿಯುಕ್ತಿ ಮಾಡಲಾಗುತ್ತಿದೆ. ನಂತರ ಉಳಿಯುವ ಖಾಲಿ ಹುದ್ದೆಗಳಿಗೆ ಕೌನ್ಸೆಲಿಂಗ್‌ ಮೂಲಕ ಸಾಮಾನ್ಯ ವರ್ಗಾವಣೆ ಮಾಡಲಾಗುತ್ತದೆ.

ಒಂದರಿಂದ ಎಂಟನೇ ತರಗತಿಯವರೆಗಿನ ಪ್ರಾಥಮಿಕ ಶಾಲೆಗಳಲ್ಲಿ 1.53 ಲಕ್ಷ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಗಾವಣೆಯ ನೀತಿಯಂತೆ ಶೇ 7ರಷ್ಟು ಶಿಕ್ಷಕರು ವರ್ಗಾವಣೆಗೆ ಅವಕಾಶ ಪಡೆಯುತ್ತಾರೆ. ಅಂದರೆ 10,700 ಶಿಕ್ಷಕರು ಈ ಬಾರಿ ವರ್ಗಾವಣೆಗೆ ಅರ್ಹತೆ ಪಡೆಯಲಿದ್ದಾರೆ. ಅಷ್ಟೇ ಸಂಖ್ಯೆಯ ಶಿಕ್ಷಕರು ಹೆಚ್ಚುವರಿಯಾಗಿದ್ದಾರೆ.

ADVERTISEMENT

200ಕ್ಕಿಂತ ಹೆಚ್ಚಿದ್ದರಷ್ಟೇ ದೈಹಿಕ ಶಿಕ್ಷಣ ಶಿಕ್ಷಕರು:

ಯಾವುದೇ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 200ಕ್ಕಿಂತ ಹೆಚ್ಚು ಮಕ್ಕಳಿದ್ದರಷ್ಟೇ ದೈಹಿಕ ಶಿಕ್ಷಣ ಶಿಕ್ಷಕರನ್ನು ಸರ್ಕಾರ ನೀಡುತ್ತದೆ. 200ಕ್ಕಿಂತ ಕಡಿಮೆ ಮಕ್ಕಳಿದ್ದರೆ ಅಲ್ಲಿಗೆ ಅವಕಾಶವಿಲ್ಲ. ಈಗಾಗಲೇ ನೇಮಕಗೊಂಡಿರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಅವರನ್ನು ಹೆಚ್ಚುವರಿ ಎಂದು ಪರಿಗಣಿಸಿ, ಅಗತ್ಯವಿರುವ ಶಾಲೆಗಳಿಗೆ ನಿಯೋಜಿಸಲಾಗುತ್ತಿದೆ.

‘200ಕ್ಕಿಂತ ಕಡಿಮೆ ಮಕ್ಕಳು ಇದ್ದರೆ ದೈಹಿಕ ಶಿಕ್ಷಣ ಶಿಕ್ಷಕರು ಬೇಡ ಎಂಬ ಇಲಾಖೆಯ ನಿರ್ಧಾರವೇ ಅವೈಜ್ಞಾನಿಕ. 199 ಇರುವ ಮಕ್ಕಳು ದೈಹಿಕ ಶಿಕ್ಷಣ ತರಬೇತಿಯಿಂದ ವಂಚಿತರಾಗಬೇಕೇ? ಪ್ರತಿ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಸರ್ಕಾರದ ಧ್ಯೇಯಕ್ಕೆ ಇಂತಹ ನೀತಿಗಳು ವಿರುದ್ಧವಾಗಿವೆ. ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹಾಳಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಕ್ಷಣ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ತಡೆಹಾಕಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಶಿಕ್ಷಣ ಇಲಾಖೆಯ ಆಯುಕ್ತ ಆರ್‌.ವಿಶಾಲ್‌ ಅವರಿಗೆ ಲಿಖಿತ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.