ADVERTISEMENT

‘ನಿರಾಪರಾಧಿಯಾಗಲು ಒಂದೂವರೆ ಶತಮಾನ ಬೇಕಾಯಿತು’

ಅಕ್ಕೈ ಪದ್ಮಸಾಲಿ
Published 6 ಸೆಪ್ಟೆಂಬರ್ 2018, 20:30 IST
Last Updated 6 ಸೆಪ್ಟೆಂಬರ್ 2018, 20:30 IST
ಅಕ್ಕೈ ಪದ್ಮಸಾಲಿ
ಅಕ್ಕೈ ಪದ್ಮಸಾಲಿ   

ಸಾಂವಿಧಾನಿಕ ಪೀಠ ನೀಡಿದ ಈ ತೀರ್ಪು ಐತಿಹಾಸಿಕ ಮೈಲಿಗಲ್ಲು. ಈ ದಿನಕ್ಕಾಗಿ ನಾವು 157 ವರ್ಷಗಳಿಂದ ನ್ಯಾಯಾಲಯದ ಅಂಗಳದಲ್ಲಿ ಹೋರಾಡುತ್ತಿದ್ದೆವು. ಅಂತೂ ನಾವು ಅಪರಾಧಿಗಳು ಅಲ್ಲ ಎಂದು ಇಂದು ಇಡೀ ದೇಶಕ್ಕೆ ಗೊತ್ತಾಯಿತು.

ನನ್ನ ಖಾಸಗಿ ಜೀವನದಲ್ಲಿ ಸರ್ಕಾರ, ಪೊಲೀಸರು ಯಾಕೆ ಮೂಗು ತೂರಿಸಬೇಕು? ನನ್ನ ಮನೆಯಲ್ಲಿ ನನ್ನ ಸಂಗಾತಿಯೊಂದಿಗೆ ಮುಕ್ತವಾಗಿ ಜೀವನ ನಡೆಸಲು ಅವಕಾಶ ಇರಬೇಕು ಎಂದು ಅರ್ಜಿದಾರರಲ್ಲಿ ಒಬ್ಬಳಾಗಿ ನಾನೂ ಮನವಿ ಮಾಡಿದ್ದೆ. ಈ ತೀರ್ಪು ಸಾಮಾಜಿಕ ನೈತಿಕತೆ, ಧಾರ್ಮಿಕ ನೈತಿಕತೆ ಹೊರತಾಗಿ, ಸಾಂವಿಧಾನಿಕ ನೈತಿಕತೆಯನ್ನು ಎತ್ತಿಹಿಡಿದಿದೆ. ಇನ್ನುಮುಂದೆ ನಮಗೆ ಸೆಪ್ಟೆಂಬರ್‌ 6 ಕೂಡ ಸ್ವಾತಂತ್ರ್ಯ ದಿನವಿದ್ದಂತೆ.

ಎಲ್ಲ ರಾಜಕೀಯ ಪಕ್ಷಗಳು ಈ ಕುರಿತು ನಿಲುವನ್ನು ಸ್ಪಷ್ಟಪಡಿಸಬೇಕು. ಈಗ ರಾಜ್ಯ ಸರ್ಕಾರದ ಜವಾಬ್ದಾರಿ ಹೆಚ್ಚಾಗಿದೆ. ಲೈಂಗಿಕ ಅಲ್ಪಸಂಖ್ಯಾತರ ಆಯೋಗ ರಚಿಸಬೇಕು. ನಮ್ಮ ಸಮುದಾಯಕ್ಕಾಗಿ 2014ರಲ್ಲಿ ರೂಪಿಸಲಾದ ಮಾದರಿ ಕರಡು ನೀತಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು. ಆಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಪ್ರತಿನಿಧಿಗಳು ಇರಬೇಕು. ಸಲಿಂಗಿ, ದ್ವಿಲಿಂಗಿ, ಅಂತರ ಲಿಂಗಿ ವ್ಯಕ್ತಿಗಳ ಮೇಲಿನ ತಾರತಮ್ಯ, ದೌರ್ಜನ್ಯವನ್ನು ಆಯೋಗ ತಡೆಯಬೇಕು. ನಮ್ಮತನವನ್ನು ರಕ್ಷಿಸಬೇಕು.

ADVERTISEMENT

ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರಿಗೆ ಪ್ರತ್ಯೇಕ ಇಲಾಖೆ, ಆಯೋಗಗಳಿವೆ. ಹಾಗೆಯೇ ನಮ್ಮ ನೋವು–ನಲಿವುಗಳಿಗೆ ಸದಾ ಸ್ಪಂದಿಸಲು ಸಕ್ರಿಯವಾದ ಆಯೋಗದಂತಹ ಸರ್ಕಾರಿ ಸಂಸ್ಥೆಯ ಅಗತ್ಯತೆ ಇದೆ.

ಲಿಂಗತ್ವ ಪರಿವರ್ತನಾ ಶಸ್ತ್ರಚಿಕಿತ್ಸೆ(ಎಸ್‌ಆರ್‌ಎಸ್‌)ಯನ್ನು ಸರ್ಕಾರ ಉಚಿತವಾಗಿ ಮಾಡಬೇಕು ಎಂಬ ನಿಯಮವಿದೆ. ಅಪೇಕ್ಷಿತರಿಗೆ ಈ ಸೌಲಭ್ಯ ಸಿಗುತ್ತಿಲ್ಲ. ಆರೋಗ್ಯ ಸಚಿವರು ಇದರತ್ತ ಗಮನ ಹರಿಸಬೇಕು.

ಸಮುದಾಯದ ವಾದ ಆಲಿಸಿ, ಕಷ್ಟ–ನಷ್ಟಗಳನ್ನು ಅರಿತ ಸರ್ವೋಚ್ಚ ನ್ಯಾಯಮೂರ್ತಿಗಳು ಮರುಗಿ, ತೀರ್ಪು ಬರೆಯುವಾಗ ಕ್ಷಮೆ ಕೇಳಿದರು. ಬಹುವರ್ಷಗಳ ಹೋರಾಟ ವ್ಯರ್ಥವಾಗಲಿಲ್ಲ. ನಾನೀನ ನಿರಾಳವಾಗಿಯಾದರೂ ಸಾಯುತ್ತೇನೆ.

ಇಂದಿರಾಗಾಂಧಿ ಬಹಿರಂಗವಾಗಿ ತುರ್ತುಪರಿಸ್ಥಿತಿ ಘೋಷಿಸಿದ್ದರು. ಈಗಿನ ಮೋದಿ ಸರ್ಕಾರದ ಅಘೋಷಿತ ತುರ್ತುಪರಿಸ್ಥಿತಿಯ ಈ ದಿನಗಳಲ್ಲಿ ಸಾಂವಿಧಾನಿಕ ಹಕ್ಕುಗಳು ದಮನವಾಗುತ್ತಿವೆ. ಚಿಂತಕರು ಜೈಲು ಸೇರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ನ್ಯಾಯದಾನವಾಗಿ, ಪ್ರಪಂಚವೇ ನಮ್ಮ ದೇಶವನ್ನು ತಿರುಗಿ ನೋಡುವಂತಾಗಿದೆ.

ಪೀರ್‌ಪಾಷಾ(ನಿರೂಪಣೆ)

**

ಸಂಬಂಧಪಟ್ಟ ಲೇಖನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.