
ಅಕ್ಕ ಪಡೆಯ ಗಸ್ತು ವಾಹನದ ಜೊತೆಗೆ ಗೃಹರಕ್ಷಕಿಯರು
ಬೆಂಗಳೂರು: ರಾಜ್ಯದ 31 ಜಿಲ್ಲೆ ಮತ್ತು 5 ಪೊಲೀಸ್ ಕಮಿಷನರೇಟ್‌ಗಳ ವ್ಯಾಪ್ತಿಯಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ‘ಅಕ್ಕ ಪಡೆ’ಗಳನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಸಭೆ ಬಳಿಕ, ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಕೆಲವು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಈಗ ಎಲ್ಲ ಜಿಲ್ಲೆ ಮತ್ತು ಕಮಿಷನರೇಟ್‌ಗಳ ವ್ಯಾಪ್ತಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದರು.
ದೌರ್ಜನ್ಯ, ಹಿಂಸೆ, ನಿರ್ಲಕ್ಷ್ಯ ಅಥವಾ ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮಕ್ಕಳಿಗೆ ಸಕಾಲದಲ್ಲಿ ನೆರವಿನ ಹಸ್ತ ಚಾಚುವುದರ ಜತೆಗೆ ಭಯಮುಕ್ತ ವಾತಾವರಣ ಸೃಷ್ಟಿಸುವುದೂ ಈ ಪಡೆಯ ಮುಖ್ಯ ಉದ್ದೇಶ. ಅಲ್ಲದೇ, ಶಿಕ್ಷಣದ ಮೂಲಕ ಹಕ್ಕುಗಳು, ಕಾನೂನುಗಳು, ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಅವರು ವಿವರಿಸಿದರು.
*ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಬೆಂಗಳೂರು ಸಂಕೀರ್ಣಕ್ಕೆ ₹17.70 ಕೋಟಿ ಮೊತ್ತದ ಹೊಸ ಸಾಬೂನು ತಯಾರಿಸುವ ಯಂತ್ರ ಖರೀದಿ
*ಕೆಕೆಆರ್‌ಡಿಬಿ ಅನುದಾನದಲ್ಲಿ ಕಲಬುರಗಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ ಮತ್ತು ₹10 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಸಹಕಾರ ಭವನ ಸ್ಥಾಪನೆ
*ರಾಜ್ಯದಾದ್ಯಂತ ₹127.40 ಕೋಟಿ ವೆಚ್ಚದಲ್ಲಿ 196 ಗ್ರಾಮೀಣ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸ್ಥಾಪನೆಯ ಆದೇಶಕ್ಕೆ ಘಟನೋತ್ತರ ಅನುಮೋದನೆ
* ವಿವಿಧ ಕಾರಾಗೃಹಗಳಲ್ಲಿರುವ 33 ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ. ಇವರಲ್ಲಿ ಇಬ್ಬರು ಶಿಕ್ಷಾ ಬಂದಿಗಳನ್ನು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದ ನಂತರ ಬಿಡುಗಡೆಗೆ ತೀರ್ಮಾನ
*ಬೆಂಗಳೂರಿನ ಜಯನಗರದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 2ನೇ ಹಂತದ ಕಟ್ಟಡ ಕಾಮಗಾರಿಗೆ ₹24 ಕೋಟಿ
*ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ 166 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 3 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಗೆ ₹33.04 ಕೋಟಿ
* ಗುಂಡ್ಲುಪೇಟೆ ತಾಲ್ಲೂಕಿನ 131 ಗ್ರಾಮಗಳು ಮತ್ತು ಮಾರ್ಗ ಮಧ್ಯದ 32 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 3 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಗೆ ₹27.28 ಕೋಟಿ
* ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಸರಪಾಡಿ ಮತ್ತು ಇತರೆ 95 ಜನವಸತಿ ಪ್ರದೇಶಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 5 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಕಾಮಗಾರಿಗೆ ₹16.70 ಕೋಟಿ
*ಕಲಬುರಗಿ ವಿಶ್ವವಿದ್ಯಾಲಯ ಆವರಣದಲ್ಲಿ ಕೆಕೆಆರ್‌ಡಿಬಿ ಅನುದಾನದಿಂದ ಎರಡನೇ ಹಂತದಲ್ಲಿ ₹66.75 ಕೋಟಿ ವೆಚ್ಚದಲ್ಲಿ ಜಿಟಿಟಿಸಿ ಕೇಂದ್ರ ಸ್ಥಾಪನೆ
*ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗುವಂತೆ ₹20 ಕೋಟಿ ವೆಚ್ಚದಲ್ಲಿ ನಬಾರ್ಡ್ ಸಹಯೋಗದಲ್ಲಿ ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪನೆ
*ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಲ್ಲಿ ಮಹಾತ್ಮಗಾಂಧಿ, ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್‌ಗಾಂಧಿ ಪುತ್ಥಳಿಗಳನ್ನು ಸ್ಥಾಪಿಸಲು ಒಪ್ಪಿಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.