ADVERTISEMENT

ಗೃಹ ಮಂಡಳಿಯಲ್ಲಿ ಬಡ್ತಿಯಲ್ಲಿ ಮೀಸಲಾತಿ ಉಲ್ಲಂಘನೆ: ಎಸ್‌ಸಿ, ಎಸ್‌ಟಿ ನೌಕರರ ಸಂಘ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 6:08 IST
Last Updated 9 ಜೂನ್ 2022, 6:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ವಿವಿಧ ವೃಂದಗಳಲ್ಲಿ ಸೇವಾ ಜ್ಯೇಷ್ಠತೆ ನಿಗದಿಪಡಿಸುವ ವೇಳೆ ಆಗಿರುವ ವ್ಯತ್ಯಾಸವನ್ನು ಸರಿಪಡಿಸಿ, ಮರು ಪ್ರಕಟಿಸಬೇಕು. ಮೀಸಲಾತಿ ರೋಸ್ಟರ್‌ ಪ್ರಕಾರ ಪರಿಶಿಷ್ಟ ಸಮುದಾಯ ಅರ್ಹ ನೌಕರರಿಗೆ ಹುದ್ದೆಯಲ್ಲಿ ಮುಂಬಡ್ತಿ ನೀಡಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಗೃಹ ಮಂಡಳಿಯ ಆಯುಕ್ತರಿಗೆ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘ ಮನವಿ ಸಲ್ಲಿಸಿದೆ.

‘ಮಂಡಳಿಯಲ್ಲಿ 2014ರಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಜ್ಯೇಷ್ಠತಾ ಪಟ್ಟಿ ಪ್ರಕಾರ ಮೀಸಲಾತಿ ರೋಸ್ಟರ್‌ ಪಾಲಿಸಿ ಪದೋನ್ನತಿ ನೀಡುವಾಗ ಪರಿಶಿಷ್ಟ ಜಾತಿಗೆ ನೀಡಬೇಕಾದ ಹುದ್ದೆಯನ್ನು ಸಾಮಾನ್ಯ ಅಭ್ಯರ್ಥಿಗೆ ನೀಡಲಾಗಿದೆ. ಅರ್ಹ ಪರಿಶಿಷ್ಟ ಜಾತಿಯ ಅಭ್ಯರ್ಥಿ ಲಭ್ಯ ಇದ್ದರೂ ಸಾಮಾನ್ಯ ಅಭ್ಯರ್ಥಿಗೆ ಬಡ್ತಿ ನೀಡಿರುವುದು ಕಾನೂನುಬಾಹಿರ’ ಎಂದು ಸಂಘದ ಅದ್ಯಕ್ಷ ಡಿ. ಚಂದ್ರಶೇಖರಯ್ಯ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

‘ಈ ಅನ್ಯಾಯದ ಬಗ್ಗೆ ಪರಿಶಿಷ್ಟ ಸಮುದಾಯದ ನೌಕರರು ಮನವಿ ಸಲ್ಲಿಸಿದಾಗ, ತಪ್ಪು ಸರಿಪಡಿಸುವುದಾಗಿ ಲಿಖಿತವಾಗಿ ಭರವಸೆ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ, ಸಹಾಯಕ ಎಂಜಿನಿಯರ್‌ ವೃಂದದಲ್ಲಿ ವಿರೂಪಾಕ್ಷ, ಮಂಜುಳಾ ಶ್ಯಾಮ್‌ ಮತ್ತು ಅನ್ನಪೂರ್ಣ ಗೋರೆಬಾಳ ಎಂಬವರ ಜ್ಯೇಷ್ಠತೆಯನ್ನು ತಪ್ಪಾಗಿ ನಮೂದಿಸಲಾಗಿದೆ. ಸಂಬಂಧಿಸಿದ ನೌಕರರು ಮನವಿ ಸಲ್ಲಿಸಿದರೂ ಪರಿಗಣಿಸಿಲ್ಲ’ ಎಂದು ಅವರು ದೂರಿದ್ದಾರೆ.

‘ಇದೇ 7ರಂದು ನಡೆದ ಇಲಾಖಾ ಮುಂಬಡ್ತಿ ಸಭೆಯಲ್ಲಿಯೂ ಪರಿಶಿಷ್ಟ ಜಾತಿ, ಪಂಗಡದ ನೌಕರರ ಮನವಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆ ಮೂಲಕ, ಗೃಹ ಮಂಡಳಿ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಆದೇಶಗಳನ್ನು ಉಲ್ಲಂಘಿಸಿ ಪರಿಶಿಷ್ಟ ಸಮುದಾಯದ ನೌಕರರಿಗೆ ಅನ್ಯಾಯ ಮಾಡುತ್ತಿರುವುದು ಸ್ಪಷ್ಟ. ಆದ್ದರಿಂದ, ಈ ಹಿಂದಿನ ಇಲಾಖಾ ಪದೋನ್ನತಿ ಸಮಿತಿಯ ನಡವಳಿಯನ್ನು ರದ್ದುಪಡಿಸಿ, ಜ್ಯೇಷ್ಢತೆ ಪಟ್ಟಿಯ ಅನ್ವಯ ಪರಿಶಿಷ್ಟ ಸಮುದಾಯದ ನೌಕರರಿಗೆ ಮುಂಬಡ್ತಿ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.