ಸಾಂದರ್ಭಿಕ ಚಿತ್ರ
(ಎಐ ಚಿತ್ರ)
ಬೆಂಗಳೂರು: ಕೃಷ್ಣಾ ನ್ಯಾಯಮಂಡಳಿ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್‌ನಿಂದ 524.25 ಮೀಟರ್‌ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ಮಧ್ಯೆಯೇ, ಅಣೆಕಟ್ಟೆಯ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಸರ್ಕಾರ ತಕರಾರು ತೆಗೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತಂತೆ ಮೇ 9ರಂದು ಪತ್ರ ಬರೆದಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ‘ಅಣೆಕಟ್ಟೆಯ ಎತ್ತರ ಹೆಚ್ಚಿಸಿದರೆ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳು ಪ್ರವಾಹ ಸಮಸ್ಯೆ ಎದುರಿಸಲಿವೆ. ಹೀಗಾಗಿ, ಈ ತೀರ್ಮಾನವನ್ನು ಮರುಪರಿಶೀಲಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಮಹಾರಾಷ್ಟ್ರ ಮುಖ್ಯಮಂತ್ರಿಯ ಪತ್ರ ನಮಗೆ ಆಘಾತ ತಂದಿದೆ. ಈ ಯೋಜನೆಯ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಈ ಹಿಂದೆ ಎಂದೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಬ್ರಿಜೇಶ್ ಕುಮಾರ ನೇತೃತ್ವದ ಕೃಷ್ಣಾ ನ್ಯಾಯಮಂಡಳಿ 2010ರ ಡಿಸೆಂಬರ್ 30ರಂದು ನೀಡಿದ್ದ ತೀರ್ಪಿನ ಬಗ್ಗೆ ಎಲ್ಲೂ ಪ್ರಶ್ನೆ ಎತ್ತಿರಲಿಲ್ಲ. ಅಲ್ಲದೆ, ಯೋಜನೆ ಜಾರಿ ಮಾಡಲಿ ಎಂದು ಪ್ರಮಾಣಪತ್ರವನ್ನು ಕೂಡಾ ಸಲ್ಲಿಸಿತ್ತು’ ಎಂದರು.
‘ನಮ್ಮ ರಾಜ್ಯದ ಪಾಲಿನ ನೀರು ಬಳಸಿಕೊಳ್ಳಲು ಕೃಷ್ಣಾ ನ್ಯಾಯಮಂಡಳಿ ತೀರ್ಪಿನಂತೆ ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಮೀಟರ್‌ಗೆ ಹೆಚ್ಚಿಸಬೇಕಿದೆ. ನ್ಯಾಯಮಂಡಳಿ ತೀರ್ಪು ನೀಡಿದಾಗ ಸುಮ್ಮನಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ತೀವ್ರ ಆಶ್ಚರ್ಯ ಉಂಟು ಮಾಡಿದೆ’ ಎಂದರು.
‘ಅಣೆಕಟ್ಟೆಯ ಎತ್ತರ ಹೆಚ್ಚಿಸುವ ಯೋಜನೆಯು ನ್ಯಾಯಮಂಡಳಿಯಲ್ಲಿ ನಮಗೆ ಸಿಕ್ಕಿರುವ ಹಕ್ಕು. ಹೀಗಾಗಿ ನಮ್ಮ ಮುಖ್ಯಮಂತ್ರಿಯವರು ಒಂದೆರಡು ದಿನಗಳಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಪತ್ರ ಬರೆಯಲಿದ್ದಾರೆ. ಈ ಯೋಜನೆ ಅನುಷ್ಠಾನಗೊಳಿಸುವ ಮೂಲಕ ರಾಜ್ಯ ಹಾಗೂ ರೈತರ ಹಿತ ಕಾಯಲು ಎಲ್ಲ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು’ ಎಂದು ಶಿವಕುಮಾರ್ ಅವರು ಮನವಿ ಮಾಡಿದರು.
‘ವಿ. ಸೋಮಣ್ಣ ಅವರು ಕೇಂದ್ರ ಜಲಶಕ್ತಿ ಖಾತೆಯ ರಾಜ್ಯ ಸಚಿವರು. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ. ನೆರೆ ರಾಜ್ಯಗಳ ಜತೆ ತಿಕ್ಕಾಟ ನಮಗೆ ಇಷ್ಟವಿಲ್ಲ. ಈ ಯೋಜನೆ ವಿಳಂಬ ಆಗುತ್ತಿರುವುದರಿಂದ ಯೋಜನೆಯ ವೆಚ್ಚ ವಿಪರೀತವಾಗಿ ಏರಿಕೆಯಾಗುತ್ತಿದ್ದು, ಭೂಸ್ವಾಧೀನಕ್ಕೆ ₹ 1 ಲಕ್ಷ ಕೋಟಿ ಬೇಕಾಗಿದೆ’ ಎಂದು ವಿವರಿಸಿದರು.
‘ನಮ್ಮ ರೈತರ ಹಿತ ಕಾಯಲು ನೀವು (ರಾಜ್ಯದ ಸಂಸದರು, ಕೇಂದ್ರ ಸಚಿವರು) ಯಾವಾಗ ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಬರಲು ನಮ್ಮ ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಬರೆದಿರುವ ಪತ್ರ ಮತ್ತು ಅದಕ್ಕೆ ನಮ್ಮ ಮುಖ್ಯಮಂತ್ರಿ ಬರೆಯುವ ಪತ್ರವನ್ನು ಎಲ್ಲ ಸಂಸದರಿಗೆ ರವಾನಿಸುತ್ತೇವೆ’ ಎಂದರು.
‘ಅಣೆಕಟ್ಟೆಯನ್ನು ಎತ್ತರಿಸುವ ವಿಚಾರವಾಗಿ ಕೇಂದ್ರ ಸಚಿವರನ್ನು ಮುಖ್ಯಮಂತ್ರಿ ಮತ್ತು ನಾನು ಭೇಟಿ ಮಾಡಿದ್ದೆವು. ಈ ಬಗ್ಗೆ ಸಭೆ ಕರೆದು, ಚರ್ಚಿಸಿ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ್ದ ಕೇಂದ್ರ ಸಚಿವರು, ಸಭೆಗೆ ದಿನ ಕೂಡಾ ನಿಗದಿ ಮಾಡಿದ್ದರು. ಹೀಗಾಗಿ ಸಚಿವರು, ಕಾನೂನು ತಜ್ಞರು ಮತ್ತು ಆಲಮಟ್ಟಿ ಭಾಗದ ಶಾಸಕರ ಜತೆ ಆಂತರಿಕ ಸಭೆ ಮಾಡಿ ಸಲಹೆ ಪಡೆದಿದ್ದೆ. ಸಭೆಗೆ ತೆರಳುವಾಗ ಸಭೆ ಮುಂದೂಡಿರುವ ಸಂದೇಶ ಬಂತು. ಭಾರತ– ಪಾಕಿಸ್ತಾನ ನಡುವಿನ ಯುದ್ಧದ ವಾತಾವರಣದ ಕಾರಣಕ್ಕೆ ಸಭೆ ಮುಂದೂಡಿಕೆ ಆಗಿರಬಹುದು ಎಂದು ಭಾವಿಸಿದ್ದೆ’ ಎಂದರು.
‘ಮಹಾರಾಷ್ಟ್ರ ಮುಖ್ಯಮಂತ್ರಿ ಪತ್ರ ಬರೆದಿರುವುದರ ಹಿಂದೆ ರಾಜಕೀಯ ಇದೆಯೇ’ ಎಂದು ಕೇಳಿದಾಗ, ‘ಈ ವಿಚಾರ ರಾಜಕೀಯವೊ, ಅಲ್ಲವೊ ಎಂಬ ಪ್ರಶ್ನೆಗೆ ನಾನು ಪ್ರತಿಕ್ರಿಯಿಸುವುದಿಲ್ಲ. ರಾಜ್ಯದ ಹಿತಾಸಕ್ತಿ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ನಮ್ಮ ಪಾಲಿನ ಹಕ್ಕಿನ ನೀರು ಬಳಸಲು ಯೋಜನೆ ಜಾರಿ ಆಗಬೇಕು ಎನ್ನುವುದಷ್ಟೆ ಮುಖ್ಯ. ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಿಮ್ಮ ಪಾಲಿನ ನೀರನ್ನು ನೀವು ಪಡೆದುಕೊಂಡು, ನಮ್ಮ ಪಾಲಿನ ಹಕ್ಕು ಪಡೆಯಲು ಬಿಡಿ ಎಂದು ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಸಂಬಂಧಿಸಿದ ರಾಜ್ಯಗಳಿಗೂ ಮನವಿ ಮಾಡುತ್ತೇನೆ’ ಎಂದರು.
‘ಮಹಾರಾಷ್ಟ್ರ ಸರ್ಕಾರ ವ್ಯಕ್ತಪಡಿಸಿರುವ ಆಕ್ಷೇಪಕ್ಕೆ ವೈಜ್ಞಾನಿಕ ನೆಲೆ ಏನು’ ಎಂಬ ಪ್ರಶ್ನೆಗೆ, ‘ಅವರ ಆಕ್ಷೇಪಗಳ ಬಗ್ಗೆ ಚರ್ಚಿಸಿದ ನಂತರವೇ ನ್ಯಾಯಮಂಡಳಿ ತೀರ್ಪು ನೀಡಿದೆ. ಕೇಂದ್ರ ಸರ್ಕಾರದ ಅಧಿಸೂಚನೆ ಹೊರಡಿಸಲು ಮಾತ್ರ ಬಾಕಿ’ ಎಂದರು.
ಯೋಜನೆಯ ಲಾಭ: ಕಲಬುರಗಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳ 5.30 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ
ಸವಾಲು: ಜಲಾಶಯ ಎತ್ತರ ಹೆಚ್ಚಳದಿಂದ 75,563 ಎಕರೆ ಜಲಾವೃತಗೊಳ್ಳಲಿದೆ. 20 ಪುನರ್ವಸತಿ ಕೇಂದ್ರಗಳ ಸ್ಥಾಪನೆಗೆ 6,467 ಎಕರೆ, ಕಾಲುವೆಗಳ ಜಾಲ ನಿರ್ಮಾಣಕ್ಕೆ 51,847 ಎಕರೆ ಸೇರಿ ಒಟ್ಟು 1,33,867 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಿದೆ.
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದರಿಂದ ಮಹಾರಾಷ್ಟ್ರದಲ್ಲಿ ಪ್ರವಾಹ ಎದುರಾದರೆ, ಆ ಪರಿಸ್ಥಿತಿಯನ್ನು ಆಂತರಿಕವಾಗಿ ಅಲ್ಲಿನ ಸರ್ಕಾರ ಸರಿಪಡಿಸಿಕೊಳ್ಳಬೇಕು. ಎತ್ತರ ಹೆಚ್ಚಿಸುವ ಕುರಿತಂತೆ ಕೇಂದ್ರ ಸಚಿವರು ಹಾಗೂ ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿ ನಾವು ಒತ್ತಡ ಹಾಕಬೇಕು. ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು. ಈ ಯೋಜನೆಯ ಗೆಜೆಟ್ ಅಧಿಸೂಚನೆಯ ಪ್ರಕಟಣೆಗಾಗಿ 2013ರಿಂದಲೂ ಕಾಯುತ್ತಿದ್ದೇವೆ. ಇನ್ನೆಷ್ಟು ದಿನ ಕಾಯಬೇಕು?–ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.