ಲೋಕಾರ್ಪಣೆಗೆ ಸಿದ್ಧವಾಗಿರುವ ಅಂಬಾರಗೋಡ್ಲು–ಕಳಸವಳ್ಳಿ ನಡುವಿನ ತೂಗುಸೇತುವೆ
ಶಿವಮೊಗ್ಗ: ಸಾಗರ ತಾಲ್ಲೂಕಿನ ಅಂಬಾರ ಗೋಡ್ಲು-ಕಳಸವಳ್ಳಿ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ₹473 ಕೋಟಿ ವೆಚ್ಚದ ತೂಗುಸೇತುವೆಯನ್ನು ಜುಲೈ 14ರಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆ ಮಾಡುವರು.
ಸೇತುವೆಯ ಉದ್ಘಾಟನೆ ಕಾರ್ಯ ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸ್ಥಳೀಯ ಮುಖಂಡರಿಗೆ ಆಹ್ವಾನ ನೀಡುವ ವಿಚಾರದಲ್ಲಿ ಶಿಷ್ಟಾಚಾರದ ಪಾಲನೆ ಸಂಗತಿ ಈಗ ಜಿಲ್ಲೆಯಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
‘ಇದು ಬಿಜೆಪಿ ಕಾರ್ಯಕ್ರಮವಾಗಿ ಮಾರ್ಪಟ್ಟಿದೆ. ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಣ ಕೊಟ್ಟಿರಬಹುದು. ಕಾಮಗಾರಿ ವೇಳೆ ರಾಜ್ಯ ಸರ್ಕಾರ ಸಹಕಾರ ಕೊಟ್ಟಿಲ್ಲವೇ’ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದ್ದಾರೆ.
‘ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರನ್ನು ಕರೆಯುವಾಗ ಶಿಷ್ಟಾಚಾರದಂತೆ ಆಹ್ವಾನಪತ್ರ ನೀಡದೇ ಅಗೌರವ ತೋರಿದ್ದಾರೆ. ಸಾಗರ ಕ್ಷೇತ್ರದ ಶಾಸಕನಾದ ನನಗೇ ಆಹ್ವಾನ ನೀಡಿಲ್ಲ. ಸಿಗಂದೂರು ದೇವಸ್ಥಾನದ ಧರ್ಮದರ್ಶಿ ಎಸ್.ರಾಮಪ್ಪ ಅವರನ್ನೂ ಕರೆಯದೆ ಅಪಮಾನಿಸಲಾಗಿದೆ’ ಎಂದು ಬೇಳೂರು ದೂರಿದ್ದಾರೆ.
‘ಮಂಗಳೂರಿನಲ್ಲಿ ಸೇತುವೆ ಉದ್ಘಾಟಿ ಸಲು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಕರೆಯಲಾಗಿತ್ತು. ಈಗ ಆಹ್ವಾನಪತ್ರದಲ್ಲಿ ಸಿಗಂದೂರು ಧರ್ಮದರ್ಶಿ ಹೆಸರು ಹಾಕಲು ಶಿಷ್ಟಾಚಾರದ ನೆಪ ಒಡ್ಡಿದ್ದಾರೆ’ ಎಂಬುದು ಇಲ್ಲಿನ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಹಿಡೇಗೋಡು ಆರೋಪ.
‘ಸಿ.ಎಂ ಅವರನ್ನು ಆಹ್ವಾನಿಸುವ ವಿಚಾರದಲ್ಲಿ ಶಿಷ್ಟಾಚಾರದ ಉಲ್ಲಂಘನೆ ಆಗಿಲ್ಲ. ಆಹ್ವಾನಪತ್ರದಲ್ಲಿ ಮೊದಲ ಹೆಸರು ಅವರದ್ದೇ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೇ ಶಾಸಕರನ್ನು ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಆಹ್ವಾನ ಪತ್ರ ಶುಕ್ರವಾರ ರಾತ್ರಿ ಅಂತಿಮಗೊಂಡಿದೆ. ನನಗೆ ಹಾಗೂ ಯಡಿಯೂರಪ್ಪನವರಿಗೆ ಶನಿವಾರ ಕೊಟ್ಟಿದ್ದಾರೆ’ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ಪ್ರತಿಕ್ರಿಯಿಸಿದ್ದಾರೆ
‘ಸಿ.ಎಂ.ಗೆ ತಡವಾಗಿ ಆಹ್ವಾನ’
ಚಿತ್ರದುರ್ಗ: ‘ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರಿಗೆ ತಡವಾಗಿ ಆಹ್ವಾನ ನೀಡಲಾಗಿದೆ. ಅವರು ಬೇರೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಹೋಗುತ್ತಿಲ್ಲ’ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
‘ಕಾರ್ಯಕ್ರಮಕ್ಕೆ ಕರೆದಿದ್ದಾರೋ ಬಿಟ್ಟಿದ್ದಾರೋ ಬೇರೆ ಪ್ರಶ್ನೆ. ಕೇಂದ್ರ ಸಚಿವರು ಬರುತ್ತಿರುವುದರಿಂದ ಅವರನ್ನು ಗೌರವಿಸಲು ನಾನು ಹೋಗುತ್ತಿದ್ದೇನೆ’ ಎಂದು ಭಾನುವಾರ ಮಾಧ್ಯಮದವರಿಗೆ ಹೇಳಿದರು.
ಸ್ಥಳೀಯ ಜನಪ್ರತಿನಿಧಿಗಳು ಇರಲಿ, ಸಿಎಂ ಅವರನ್ನೇ ಕರೆಯದೆ ಅಗೌರವ ತೋರಿದ್ದಾರೆ. ವಿಷಯ ತಿಳಿದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಕರೆ ಮಾಡಿ ಆಹ್ವಾನಿಸಿದ್ದಾರೆ. ಜುಲೈ 14ರ ನಂತರ ಎಲ್ಲ ವಿಚಾರ ಮಾತನಾಡುವೆಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ
ಶಿಷ್ಟಾಚಾರದನ್ವಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಿ.ಎಂ ಬಳಿಗೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಕ್ಷೇತ್ರದ ಸಂಸದನಾಗಿ ನಾನೂ ಅವರಿಗೆ ಪತ್ರ ಬರೆದು ಆಹ್ವಾನಿಸಿದ್ದೇನೆಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಕಾರ್ಯಕ್ರಮಕ್ಕೆ ನಮ್ಮ ಕುಟುಂಬದವರನ್ನು ಸಂಸದರೇ ಬಂದು ಕರೆದಿದ್ದಾರೆ. ಆಹ್ವಾನಪತ್ರದಲ್ಲಿ ರಾಮಪ್ಪ ಅವರ ಹೆಸರು ಹಾಕದ ವಿಚಾರ ಗೊತ್ತಿಲ್ಲ. ನಮ್ಮೂರಿನ ಕಾರ್ಯಕ್ರಮ ಪಾಲ್ಗೊಳ್ಳಲಿದ್ದೇವೆಎಚ್.ಆರ್.ರವಿಕುಮಾರ್, ಸಿಗಂದೂರು ಧರ್ಮದರ್ಶಿ ಎಸ್.ರಾಮಪ್ಪ ಪುತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.