ADVERTISEMENT

ಭವಿಷ್ಯ ಕಟ್ಟಿಕೊಳ್ಳಲು ಆಂಧ್ರಕ್ಕೂ ಕರ್ನಾಟಕವೇ ಅವಕಾಶ ತಾಣ: ಕರ್ನಾಟಕ ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2025, 8:53 IST
Last Updated 18 ಅಕ್ಟೋಬರ್ 2025, 8:53 IST
   

ಬೆಂಗಳೂರು: ವಾಹನ ದಟ್ಟಣೆ, ಕಸದ ಸಮಸ್ಯೆ ಎಂದು ಆರೋಪಿಸಿ ಕೆಲ ಕಂಪನಿಗಳು ಬೆಂಗಳೂರು ತೊರೆಯುವ ಮಾತುಗಳನ್ನು ಆಗಾಗ ಆಡುತ್ತಿರುವಾಗ, ತಮ್ಮಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳಿ ಎಂದು ಆಹ್ವಾನ ನೀಡುತ್ತಿದ್ದ ಆಂಧ್ರಪ್ರದೇಶ ಸರ್ಕಾರಕ್ಕೆ ವಲಸೆಯ ಅಂಕಿಸಂಖ್ಯೆ ಸಹಿತ ಕರ್ನಾಟಕ ಕಾಂಗ್ರೆಸ್ ತಿರುಗೇಟು ನೀಡಿದೆ.

ಆನ್‌ಲೈನ್ ಟ್ರ್ಯಾಕಿಂಗ್‌ ವೇದಿಕೆ ‘ಬ್ಲಾಕ್‌ಬಕ್‌’ ಎಂಬ ಕಂಪನಿಯು ವಾಹನ ದಟ್ಟಣೆ ಸಮಸ್ಯೆಯಿಂದಾಗಿ ಬೆಂಗಳೂರು ತೊರೆಯುವುದಾಗಿ ನೀಡಿದ ಹೇಳಿಕೆ ದೇಶವ್ಯಾಪಿ ವ್ಯಾಪಕ ಚರ್ಚೆಗೆ ಒಳಗಾಯಿತು. ಸಾಮಾಜಿಕ ಮಾಧ್ಯಮದಲ್ಲಿ ಬೆಂಗಳೂರಿನ ಕುರಿತು ಚರ್ಚೆಗಳು ಆರಂಭವಾದವು. ಸರ್ಕಾರ ತೀವ್ರ ಮುಜುಗರಕ್ಕೂ ಒಳಗಾಯಿತು. ಇದನ್ನೇ ಅವಕಾಶ ಮಾಡಿಕೊಂಡ ಆಂಧ್ರಪ್ರದೇಶದ ಟಿಡಿಪಿ ನೇತೃತ್ವದ ಎನ್‌ಡಿಎ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಅವರು, ಬೆಂಗಳೂರು ತೊರೆಯಲಿಚ್ಛಿಸುವ ಉದ್ಯಮಿಗಳಿಗೆ ಆಂಧ್ರಪ್ರದೇಶದಲ್ಲಿ ವಿಫುಲ ಅವಕಾಶಗಳಿವೆ ಎಂದು ಟ್ವೀಟ್‌ ಮಾಡಿ ಗಮನ ಸೆಳೆದಿದ್ದರು.

ಇದೀಗ ಅಂಕಿಸಂಖ್ಯೆ ಸಹಿತ ಕರ್ನಾಟಕ್ಕೆ ಬಂದಿರುವ ಅನ್ಯರಾಜ್ಯದವರ ಮಾಹಿತಿ ಸಹಿತ ಪೋಸ್ಟ್‌ ಒಂದನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದೆ. 

ADVERTISEMENT

ಕರ್ನಾಟಕದಲ್ಲಿ ಒಟ್ಟು 78,289 ವಲಸೆ ಕಾರ್ಮಿಕರು ಅನ್ಯರಾಜ್ಯಗಳಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇವರ ಜತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುತ್ತಿರುವ 18,865 ವಲಸೆ ಕಾರ್ಮಿಕರು ತಮ್ಮ ಹೆಸರುಗಳನ್ನು ಕಾರ್ಮಿಕ ಇಲಾಖೆಯಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಅನ್ಯರಾಜ್ಯದಿಂದ ಉದ್ಯೋಗ ಅರಸಿ ರಾಜ್ಯಕ್ಕೆ ಬಂದವರ ಒಟ್ಟು ಸಂಖ್ಯೆ 97,154 ರಷ್ಟಿದೆ.

ಉದ್ಯೋಗ ಅರಸಿ ಕರ್ನಾಟಕಕ್ಕೆ ಬಂದಿರುವವರಲ್ಲಿ ಆಂಧ್ರಪ್ರದೇಶದವರೇ ಅತಿ ಹೆಚ್ಚು ಶೇ 16.3ರಷ್ಟಿದೆ ಎಂದು ಕರ್ನಾಟಕ ಕಾಂಗ್ರೆಸ್‌ ಪೋಸ್ಟರ್‌ ಒಂದನ್ನು ಹಂಚಿಕೊಂಡಿದೆ.

ಮಹಾರಾಷ್ಟ್ರದಿಂದ ಬಂದವರ ಸಂಖ್ಯೆ ಶೇ 12.4, ಬಿಹಾರದಿಂದ ಶೇ 11.8, ರಾಜಸ್ಥಾನದಿಂದ ಶೇ 9.2, ಒಡಿಶಾದಿಂದ ಶೇ 8, ತಮಿಳುನಾಡಿನಿಂದ ಶೇ 6.6, ಉತ್ತರ ಪ್ರದೇಶದಿಂದ ಶೇ 6.4, ಅಸ್ಸಾಂನಿಂದ ಶೇ 5, ಪಶ್ಚಿಮ ಬಂಗಾಳದಿಂದ ಶೇ 4.5, ಗುಜರಾತ್‌ನಿಂದ ಶೇ 2.2 ಹಾಗೂ ಕೇರಳದಿಂದ ಕರ್ನಾಟಕಕ್ಕೆ ಬರುತ್ತಿರುವವರ ಸಂಖ್ಯೆ ಶೇ 2.1 ಎಂದು ಹೇಳಿದೆ. 

ಇದರಲ್ಲಿ ಆಂಧ್ರಪದೇಶದಿಂದ ರಾಜ್ಯಕ್ಕೆ ಬಂದವರ ಸಂಖ್ಯೆಯೇ ದೊಡ್ಡದು. ಹೀಗಾಗಿ ಭವಿಷ್ಯವನ್ನು ಕಟ್ಟಿಕೊಳ್ಳುವ ವಿಷಯ ಬಂದಾಗ ಆಂಧ್ರ ಕೂಡಾ ಕರ್ನಾಟಕದತ್ತಲೇ ನೋಡುತ್ತದೆ. ಕರ್ನಾಟಕವು ಅವಕಾಶಗಳ ನಾಡು, ನಾವೀನ್ಯತೆ ಮತ್ತು ನೈಜ ಬೆಳವಣಿಗೆಯ ಬೀಡು. ಇದುವೇ ನಮ್ಮ ಕರ್ನಾಟಕ ಎಂದು ಕಾಂಗ್ರೆಸ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.