ಎಚ್. ಆಂಜನೇಯ
ಚಿತ್ರದುರ್ಗ: ‘ಒಳ ಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿಗೆ ಸೀಮಿತವಾಗಿ ನಡೆಯಲಿರುವ ಜಾತಿಗಣತಿ ಪ್ರಕ್ರಿಯೆ ವಿಳಂಬವಾಗುತ್ತಿದೆ. ಮುಖ್ಯಮಂತ್ರಿಯವರು ನಮ್ಮನ್ನು ಕಾಡಿಸದೇ, ಹಿಂಸಿಸದೇ, ಅಳುವಂತೆ ಮಾಡದೇ ಒಳಮೀಸಲಾತಿ ಜಾರಿಗೊಳಿಸಬೇಕು. ನಮ್ಮ ಕಣ್ಣಲ್ಲಿ ನೀರು ಖಾಲಿಯಾಗಿದ್ದು ಇನ್ನು
ಮುಂದೆ ರಕ್ತವೇ ಉತ್ತರವಾಗಲಿದೆ’ ಎಂದು ಕೆಪಿಸಿಸಿ ಉಪಾಧ್ಯಕ್ಷ ಎಚ್. ಆಂಜನೇಯ ಅಸಮಾಧಾನ
ವ್ಯಕ್ತಪಡಿಸಿದರು.
‘ಜಾತಿ ಗಣತಿ ಪ್ರಕ್ರಿಯೆ ಸಂಶಯಕ್ಕೆ ಎಡೆಮಾಡಿಕೊಡದ ರೀತಿಯಲ್ಲಿ ನಡೆಯಬೇಕು. ಆದರೆ, ಗಣತಿ ಆರಂಭ
ಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಏಪ್ರಿಲ್, ಮೇ ತಿಂಗಳಲ್ಲಿ ಗಣತಿ ಪೂರೈಸಿ, ವರದಿಸ್ವೀಕರಿಸಬೇಕು. ಜೂನ್ 1ರಿಂದಲೇ ಒಳಮೀಸಲಾತಿ ಜಾರಿಯಾಗಬೇಕು. ಇಡೀ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗುತ್ತಿದ್ದು ಕಳವಳ ಮೂಡಿದೆ. ಒಳಮೀಸಲಾತಿ ಜಾರಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
‘2024ರ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಅಕ್ಟೋಬರ್ 28ರಂದು ಒಳಮೀಸಲಾತಿ ಜಾರಿಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, 3 ತಿಂಗಳು ತಡವಾಯಿತು. ದತ್ತಾಂಶ ಸಂಗ್ರಹಕ್ಕಾಗಿ ರಚನೆಗೊಂಡ ಆಯೋಗ ಯಾವುದೇ ಸ್ಪಷ್ಟ ತೀರ್ಮಾನ ಕೈಗೊಳ್ಳಲಿಲ್ಲ. ಅಲ್ಲಿಗೆ 8 ತಿಂಗಳು ತಡವಾಯಿತು. ಈಗ ಜನಗಣತಿಗಾಗಿ 2 ತಿಂಗಳು ಸಮಯ ನೀಡಲಾಗಿದೆ. ಆದರೆ ಅದಕ್ಕಾಗಿ ಯಾವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದರಿಂದ ಮಾದಿಗ ಸಮುದಾಯದವರು ಸಿಟ್ಟಾಗಿದ್ದಾರೆ. ವಿಳಂಬ ನೀತಿಯಿಂದಾಗಿ ಸಮುದಾಯದಲ್ಲಿ ಅನುಮಾನ ಮೂಡಿದೆ’ ಎಂದರು.
‘ಜನಗಣತಿ ಪ್ರಕ್ರಿಯೆಯ ಮಾನದಂಡಗಳು ಯಾವುವು?, ಪ್ರಶ್ನಾವಳಿಯಲ್ಲಿ ಏನಿದೆ? ಎಂಬ ಬಗ್ಗೆ ಸಮುದಾಯದ ಮುಖಂಡರಿಗೆ ಮೊದಲೇ ಮಾಹಿತಿ ನೀಡಬೇಕು. ಗಣತಿದಾರರನ್ನಾಗಿ ಪರಿಶಿಷ್ಟ ಜಾತಿ ಶಿಕ್ಷಕರನ್ನು ನೇಮಿಸದೇ ಬೇರೆ ಜಾತಿಯವರನ್ನೇ ನಿಯೋಜಿಸಬೇಕು. ಹಳೇ ಮೈಸೂರು ಭಾಗದಲ್ಲಿ ಹೊಲೆಯ, ಮಾದಿಗರು ಆದಿ ಕರ್ನಾಟಕ ಅಥವಾ ಆದಿ ದ್ರಾವಿಡ ಎಂಬ ಒಂದೇ ವರ್ಗದಲ್ಲಿ ಪ್ರಮಾಣ ಪತ್ರ ಪಡೆದಿರುವುದು ಗೊಂದಲ ಮೂಡಿಸಿದೆ. ಹೀಗಾಗಿ ಗಣತಿದಾರರು ಬಂದಾಗ ಮೂಲ ಜಾತಿಯ ಹೆಸರು ಬರೆಸಬೇಕು’ ಎಂದು ಸಲಹೆ ನೀಡಿದರು.
‘ತರಾತುರಿಯಲ್ಲಿ 10,000 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿರುವುದು ಕುತಂತ್ರದ ಭಾಗವಾಗಿದೆ. ಮಾದಿಗರನ್ನು ವಂಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ಬಂದ ದಿನದಿಂದಲೇ ನೇಮಕಾತಿ ರದ್ದು ಮಾಡಬೇಕಾಗಿತ್ತು. ಅಲ್ಲೂ ನಮಗೆ ಅನ್ಯಾಯವಾಗಿದೆ. ಆದರೂ ಅಕ್ಟೋಬರ್ 28ರ ನಂತರ ಆಗಿರುವ ಎಲ್ಲ ನೇಮಕಾತಿ ಆದೇಶವನ್ನು ರದ್ದುಪಡಿಸಬೇಕು. ಮುಖ್ಯಮಂತ್ರಿ ಈ ವಿಷಯದಲ್ಲಿ ನಮ್ಮ ನೆರವಿಗೆ ಬರುತ್ತಾರೆ ಎಂಬ ವಿಶ್ವಾಸವಿದೆ’ ಎಂದರು. ಮುಖಂಡರಾದ ಒ.ಶಂಕರ್, ಬಿ.ಪಿ.ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.