ADVERTISEMENT

Elephant Arjuna | ಹುಲಿಯನ್ನು ಓಡಿಸಿದ್ದ ‘ಬಲಶಾಲಿ’ ಅರ್ಜುನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 19:15 IST
Last Updated 4 ಡಿಸೆಂಬರ್ 2023, 19:15 IST
<div class="paragraphs"><p>ಅರ್ಜುನ ಆನೆ–&nbsp; ಕಡತ ಚಿತ್ರ</p></div>

ಅರ್ಜುನ ಆನೆ–  ಕಡತ ಚಿತ್ರ

   

ಬೆಂಗಳೂರು: ಇದೇ ವರ್ಷದ ಜ.23ರಂದು ಹುಲಿಯನ್ನು ಓಡಿಸಿ, ಜನ ನಿಟ್ಟುಸಿರು ಬಿಡುವಂತೆ ಮಾಡಿ ಗಮನಸೆಳೆದಿದ್ದ. ಎಚ್.ಡಿ.ಕೋಟೆ ತಾಲ್ಲೂಕು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬಳ್ಳೆ ಹಾಡಿ ಯುವಕನನ್ನು ಕೊಂದಿದ್ದ ಹುಲಿಯನ್ನು ‘ಅರ್ಜುನ’ ನೇತೃತ್ವದಲ್ಲಿ ಆನೆಗಳಿಂದ ಕಾಡಿಗಟ್ಟಲಾಗಿತ್ತು. ಜನವಸತಿ ಪ್ರದೇಶದಲ್ಲಿ 4 ಮರಿಗಳೊಂದಿಗೆ ಓಡಾಡುತ್ತಿರುವ ‘ಬ್ಯಾಕ್ ವಾಟರ್ ಫೀಮೇಲ್’ ಹುಲಿಯು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಅವರ ಆತಂಕವನ್ನು ನಿವಾರಿಸುವಲ್ಲಿ ಅರ್ಜುನ ನೆರವಾಗಿದ್ದ.

ಅದು ಕೆಲ ವರ್ಷಗಳ ಹಿಂದೆ (2018ಕ್ಕಿಂತ ಹಿಂದೆ) ಮದವೇರಿದ ಸಂದರ್ಭದಲ್ಲಿ ಬಳ್ಳೆ ಶಿಬಿರದಿಂದ ತಪ್ಪಿಸಿಕೊಂಡಿತ್ತು. ನಾಲ್ಕು ದಿನ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ನಂತರ ಕೇರಳ ಗಡಿ ಭಾಗದಲ್ಲಿ ಪತ್ತೆಯಾಗಿತ್ತು.

ADVERTISEMENT

‘ವಿಶ್ವಾಸ ಗಳಿಸಿದರೆ ಸುಮ್ಮನಿರುತ್ತಿದ್ದ’

ಅರ್ಜುನನಿಗೆ ಆರಂಭದಲ್ಲಿ ದೊಡ್ಡಮಾಸ್ತಿ, ಬಳಿಕ ಅವರ ಪುತ್ರ ಮಹೇಶ್‌, ಬಳಿಕ ವಿನು ಮಾವುತರಾಗಿದ್ದರು.

‘ಅರ್ಜುನ ಆನೆಯನ್ನು ಮೊದಲ ಬಾರಿ ಮುನ್ನಡೆಸಲು ಅವಕಾಶ ದೊರೆತಾಗ ಹೆಚ್ಚಿನವರು ಹೆದರಿಸಿದ್ದರು. ಅಪಾಯಕಾರಿ, ಅದರಿಂದ ತೊಂದರೆಯಾಗಬಹುದೆಂದು ಆತ್ಮಸ್ಥೈರ್ಯ ಕುಗ್ಗಿಸಿದ್ದರು. ಅದರ ಭಾವನೆ ಅರಿತಿದ್ದ ನಾನು ಯಾವುದೇ ಬೆದರಿಕೆಗೆ ಜಗ್ಗಲಿಲ್ಲ‌. ಕಣ್ಣಿನಲ್ಲೇ ಅದರ ಪ್ರೀತಿ ಸಂಪಾದಿಸಿದೆ’ ಎಂದು ವಿನು ತಿಳಿಸಿದ್ದರು.

‘ಹೊಸಬರನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ಅದಕ್ಕೆ ತುಂಬಾ ಕೋಪ. ಆದರೆ, ಅಷ್ಟೇ ಭಾವುಕ ಜೀವಿ. ವ್ಯಕ್ತಿಯ ಮೇಲೆ ವಿಶ್ವಾಸ ಬಂದರೆ ಸುಮ್ಮನಿರುತ್ತದೆ’ ಎಂದು ತಿಳಿಸಿದ್ದರು.

ವಿರೋಚಿತ ಸಾವು: ಎಚ್‌ಡಿಕೆ

‘ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆಗಳ ಸೆರೆಗೆ ನಡೆಸಿದ ಕಾರ್ಯಾಚರಣೆ ವೇಳೆ ಒಂಟಿ ಸಲಗದ ದಾಳಿಗೆ ತುತ್ತಾಗಿ ಸಾಕಾನೆ ಅರ್ಜುನ ವೀರಮರಣ ಹೊಂದಿದ ಘಟನೆ ತಿಳಿದು ಬಹಳ ನೋವುಂಟಾಯಿತು. ದಸರಾ ಅಂಬಾರಿಯನ್ನು ಹೊತ್ತು ಸಾಗಿದ್ದ ಅರ್ಜುನ ಇನ್ನು ನೆನಪಷ್ಟೇ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ‘ಎಕ್ಸ್‌’ ಮಾಡಿದ್ದಾರೆ.

‘ಸ್ಥಳಾಂತರ ಕಾರ್ಯಾಚರಣೆ ವೇಳೆ ಸಾಕಾನೆಗಳು-ಕಾಡಾನೆಗಳ ನಡುವಿನ ಭೀಕರ ಕಾಳಗದ ವೇಳೆ ಇತರೆ ಸಾಕಾನೆಗಳು ಪಲಾಯನ ಮಾಡಿದರೆ, ಅರ್ಜುನ ಮಾತ್ರ ಒಂಟಿ ಸಲಗದ ಜತೆ ವಿರೋಚಿತವಾಗಿ ಸೆಣಸಾಡಿತ್ತು. ಇಂಥ ವಿರೋಚಿತ ಆನೆ ಸಾವನ್ನಪ್ಪಿರುವುದು ಅತ್ಯಂತ ದುಃಖದ ಸಂಗತಿ’ ಎಂದಿದ್ದಾರೆ.

‘ಕಾಡಾನೆಗಳನ್ನು ಸೆರೆ ಹಿಡಿಯುವಾಗ ತಮ್ಮ ಪ್ರಾಣ ರಕ್ಷಣೆಯ ಜತೆಗೆ ವನ್ಯಮೃಗಗಳ ಜೀವಕ್ಕೆ ಹಾನಿ ಆಗದಂತೆ ಅರಣ್ಯ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಲಿ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.