ADVERTISEMENT

ಕೃತಕ ಬಣ್ಣ ಬಳಕೆ ದೃಢ: ಸಿಹಿ ತಿಂಡಿ ಜತೆ ಮಿಕ್ಸ್ಚರ್‌ ಸಹ ಅಸುರಕ್ಷಿತ!

ವಿಶೇಷ ಅಭಿಯಾನದಲ್ಲಿ ಆಹಾರ ಮಾದರಿ ಸಂಗ್ರಹ

ವರುಣ ಹೆಗಡೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
   

ಬೆಂಗಳೂರು: ಮೈಸೂರು ಪಾಕ್‌ನಂತಹ ಸಿಹಿ ತಿಂಡಿಗಳ ಜತೆಗೆ, ಮಿಕ್ಸ್ಚರ್‌ನಂತಹ ಖಾರದ ತಿನಿಸುಗಳಿಗೂ ಕೃತಕ ಬಣ್ಣ ಬಳಕೆ ಮಾಡುತ್ತಿರುವುದು ಆಹಾರ ಸುರಕ್ಷತೆ ಇಲಾಖೆ ನಡೆಸಿದ ವಿಶ್ಲೇಷಣೆಯಿಂದ ದೃಢಪಟ್ಟಿದೆ. 

ವಿವಿಧ ತಿನಿಸುಗಳು ಮತ್ತು ಆಹಾರ ಪದಾರ್ಥಗಳಲ್ಲಿ ಅಸುರಕ್ಷಿತ ಹಾಗೂ ನಿಷೇಧಿತ ಕೃತಕ ಬಣ್ಣಗಳ ಬಳಕೆ ಪತ್ತೆಗೆ ಸಂಬಂಧಿಸಿದಂತೆ ಇಲಾಖೆ ವಿಶೇಷ ಅಭಿಯಾನ ನಡೆಸುತ್ತಿದೆ. 2024–25 ಹಾಗೂ 2025–26ನೇ ಸಾಲಿಗೆ 19 ಅಭಿಯಾನಗಳನ್ನು ಇಲಾಖೆ ನಡೆಸಿ, ವಿವಿಧ ಆಹಾರ ತಿನಿಸುಗಳ ಸಾವಿರಾರು ಮಾದರಿಗಳನ್ನು ಸಂಗ್ರಹಿಸಿದೆ. ಈ ಮಾದರಿಗಳನ್ನು ಇಲಾಖೆಯ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿ, ಅಸುರಕ್ಷಿತ ಮಾದರಿಗಳನ್ನು ಪತ್ತೆ ಮಾಡಲಾಗಿದೆ. ಸಿಹಿ ತಿಂಡಿಗಳಲ್ಲಿಯೇ ಹೆಚ್ಚಾಗಿ ಕೃತಕ ಬಣ್ಣ ಬಳಕೆ ಮಾಡಿರುವುದು ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ. 

2014ರ ಫೆಬ್ರವರಿ ತಿಂಗಳಿಂದ ಈ ವಿಶೇಷ ಅಭಿಯಾನ ಪ್ರಾರಂಭವಾಗಿದೆ. 2025ರ ಮೇ ಅಂತ್ಯದ ವೇಳೆಗೆ 19 ಬಗೆಯ ತಿನಿಸು ಹಾಗೂ ಪಾನೀಯಗಳ 3,787 ಮಾದರಿಗಳನ್ನು ವಿಶ್ಲೇಷಣೆ ಮಾಡಲಾಗಿದೆ. ಈ ಮಾದರಿಗಳನ್ನು ಬೀದಿ ಬದಿ ಆಹಾರದ ಮಳಿಗೆಗಳು ಹಾಗೂ ಹೋಟೆಲ್‌ಗಳಿಂದ ಸಂಗ್ರಹಿಸಲಾಗಿತ್ತು. ಇವುಗಳಲ್ಲಿ 374 ಮಾದರಿಗಳು ಅಸುರಕ್ಷಿತವೆಂಬ ವರದಿಗಳು ಬಂದಿವೆ. 

ADVERTISEMENT

ಮೊಕದ್ದಮೆ ದಾಖಲು: ಜಿಲೇಬಿ, ಕೇಕ್, ಖೋವಾ, ಚಟ್ನಿಗಳು, ಸಾಸ್‌ಗಳು, ಕಬಾಬ್ ಸೇರಿ ವಿವಿಧ ಆಹಾರ ಮಾದರಿಗಳ ಜತೆಗೆ, ಶರಬತ್ತು, ಐಸ್‌ಕ್ರೀಂ, ಹಣ್ಣಿನ ಜ್ಯೂಸ್‌ಗಳು, ತಂಪು ಪಾನೀಯಗಳ ಮಾದರಿಗಳನ್ನೂ ಸಂಗ್ರಹಿಸಿ, ವಿಶ್ಲೇಷಣೆ ಮಾಡಲಾಗಿದೆ. ಆಹಾರ ಮಾದರಿಗಳ ವಿಶ್ಲೇಷಣಾ ವರದಿಗಳ ಅನ್ವಯ, ಆಹಾರ ಉದ್ದಿಮೆದಾರರಿಗೆ ಎಚ್ಚರಿಕೆ ನೀಡಿ ಅರಿವು ಮೂಡಿಸಲಾಗುತ್ತಿದೆ. ಇಲಾಖೆ ಮಾಹಿತಿ ಪ್ರಕಾರ, ಈ ವಿಶ್ಲೇಷಣಾ ವರದಿ ಆಧರಿಸಿ 68 ಪ್ರಕರಣಗಳಲ್ಲಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನೂ ದಾಖಲಿಸಲಾಗಿದೆ. 

ಈಗಾಗಲೇ ಗೋಬಿ ಮಂಚೂರಿ ಮತ್ತು ಕಬಾಬ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಬಾಂಬೆ ಮಿಠಾಯಿಗೆ (ಕಾಟನ್ ಕ್ಯಾಂಡಿ) ನಿಷೇಧಿತ ಹಾಗೂ ಕ್ಯಾನ್ಸರ್‌ಕಾರಕ ‘ರೊಡಮೈನ್ ಬಿ’ ಬಣ್ಣ ಬಳಕೆ ಮಾಡುತ್ತಿರುವುದು ಪ್ರಯೋಗಾಲಯದ ವಿಶ್ಲೇಷಣೆಯಿಂದ ದೃಢಪಟ್ಟಿತ್ತು. ಆದ್ದರಿಂದ ಇಲಾಖೆಯು ಬಾಂಬೆ ಮಿಠಾಯಿಗಳಿಗೆ ಸಹ ಕೃತಕ ಬಣ್ಣ ಬಳಕೆ ನಿರ್ಬಂಧಿಸಿ, ಆದೇಶ ಹೊರಡಿಸಿದೆ. 

‘ಆಹಾರ ಪದಾರ್ಥಗಳ ಬಳಕೆಗೆ ಅನುಮೋದನೆ ನೀಡಿರದ ಬಣ್ಣ ಬಳಸಿದಲ್ಲಿ ಅಥವಾ ಅನುಮೋದಿತ ಕೃತಕ ಬಣ್ಣಗಳನ್ನು ನಿಗದಿತ ಪ್ರಮಾಣಕ್ಕಿಂತ ಅಧಿಕ ಬಳಸಿದಲ್ಲಿ, ಅಂತಹ ಆಹಾರ ಮಾದರಿಗಳನ್ನು ಪ್ರಯೋಗಾಲಯದ ವಿಶ್ಲೇಷಣೆ ಅನುಸಾರ ಅಸುರಕ್ಷಿತವೆಂದು ಪರಿಗಣಿಸಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.  

ಬೀದಿ ಬದಿ ವ್ಯಾಪಾರಿಗಳಿಗೆ ತರಬೇತಿ

ಕೃತಕ ಬಣ್ಣಗಳನ್ನು ಬಳಸದಂತೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಬಗ್ಗೆ ಅರಿವು ಮೂಡಿಸಲು ಬೀದಿ ಬದಿ ವ್ಯಾಪಾರಿಗಳಿಗೆ ಇಲಾಖೆಯು ತರಬೇತಿ ನೀಡುತ್ತಿದೆ. ಆಹಾರ ಉದ್ದಿಮೆ ಸಂಸ್ಥೆಗಳ ಸಹಯೋಗದಲ್ಲಿ 2024–25ನೇ ಸಾಲಿನಲ್ಲಿ ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಸುರಕ್ಷತೆ ಬಗ್ಗೆ ತರಬೇತಿ ನೀಡಲಾಗಿದೆ. 2024–25 ಹಾಗೂ 2025–26ನೇ ಸಾಲಿನಲ್ಲಿ ಈವರೆಗೆ 13585 ಸಣ್ಣ ಉದ್ದಿಮೆದಾರರು ಮತ್ತು 7506 ಹೋಟೆಲ್ ಉದ್ದಿಮೆದಾರರು ಈ ತರಬೇತಿ ಪಡೆದುಕೊಂಡಿದ್ದಾರೆ. 

ಆಹಾರ ಹಾಗೂ ಪಾನೀಯಗಳು ಸುರಕ್ಷಿತವಾಗಿರಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸತತವಾಗಿ ಆಹಾರ ಪದಾರ್ಥಗಳ ಪರೀಕ್ಷೆ ನಡೆಸಲಾಗುತ್ತಿದೆ.
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.