ADVERTISEMENT

ಕವಿ ಸಿದ್ಧಲಿಂಗಯ್ಯ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆ

‘ಡಾ. ಸಿದ್ಧಲಿಂಗಯ್ಯ ಕಾವ್ಯ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 7:43 IST
Last Updated 30 ಜನವರಿ 2022, 7:43 IST
ಸಿದ್ಧಲಿಂಗಯ್ಯ
ಸಿದ್ಧಲಿಂಗಯ್ಯ    

ಬೆಂಗಳೂರು: ರಾಜ್ಯ ಸರ್ಕಾರವು ಕವಿ ಡಾ. ಸಿದ್ಧಲಿಂಗಯ್ಯ ಅವರ ಹೆಸರಿನಲ್ಲಿ ‘ಡಾ. ಸಿದ್ಧಲಿಂಗಯ್ಯ ಕಾವ್ಯ ಪ್ರಶಸ್ತಿ’ಯನ್ನು ಸ್ಥಾಪಿಸಿ, ಆದೇಶ ಹೊರಡಿಸಿದೆ. ಈ ಪ್ರಶಸ್ತಿಯನ್ನು ಅವರ ಜನ್ಮದಿನದಂದು ಯುವ ಕಾವ್ಯ ಬರಹಗಾರರೊಬ್ಬರಿಗೆ ನೀಡಲಾಗುತ್ತದೆ.

ಪ್ರಶಸ್ತಿಯು ₹ 5 ಲಕ್ಷ ನಗದು ಒಳಗೊಂಡಿರಲಿದೆ. ಶೋಷಿತ ತಳ ಸಮುದಾಯಗಳ ಧ್ವನಿಯಾಗಿ, ಸಾಮಾಜಿಕ ನ್ಯಾಯದ ಆಶಯಗಳಿಗೆ ವಿಸ್ತಾರವಾದ ನೆಲೆ ತಂದುಕೊಡಲು ಶ್ರಮಿಸಿದ ಸೃಜನಶೀಲ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಬೇಕು. ಒಂದು ವರ್ಷ ಕನ್ನಡ ಲೇಖಕರಿಗೂ ಮತ್ತೊಂದು ವರ್ಷ ಅನ್ಯ ರಾಜ್ಯಗಳ ಕನ್ನಡೇತರ ಭಾಷೆಯ ಲೇಖಕರಿಗೂ ಪ್ರಶಸ್ತಿ ಕೊಡಬೇಕು. ಪ್ರಠ್ಯಪುಸ್ತಕ, ಸಂಶೋಧನಾ ಪ್ರಬಂಧ, ಪುಸ್ತಕ ಲೇಖಕರು ಹಾಗೂ ಸಹ ಲೇಖಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಬಾರದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಇತರೆ ವಾರ್ಷಿಕ ಪ್ರಶಸ್ತಿಗಳ ಸಾಮಾನ್ಯ ನಿಯಮಾವಳಿಗಳು ಈ ಪ್ರಶಸ್ತಿಗೂ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.

ಸಾಮಾಜಿಕ ನ್ಯಾಯದ ಆಶಯಗಳಿಗೆ ಸ್ಪಂದಿಸುವ ಲೇಖಕರನ್ನು ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಒಬ್ಬರು ಪ್ರಾಧ್ಯಾಪಕರು, ಒಬ್ಬರು ಲೇಖಕರು ಸಮಿತಿಯ ಸದಸ್ಯರಾಗಿರಬೇಕು. ಶೋಷಿತ ಸಮುದಾಯದ ನಡುವೆ ಸಾಮಾಜಿಕ ನೆಲೆಯಲ್ಲಿ ಕೆಲಸ ಮಾಡುವ ಸಾಧಕರೊಬ್ಬರು ಸಮಿತಿಯಲ್ಲಿ ಸದಸ್ಯರಾಗಿ ಇರಬೇಕು ಎಂದು ಹೇಳಲಾಗಿದೆ.

ADVERTISEMENT

ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದ ಡಾ. ಸಿದ್ಧಲಿಂಗಯ್ಯ ಅವರು, 2021ರ ಜೂನ್ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೇ ತಿಂಗಳು ಅವರಿಗೆ ‘ಪದ್ಮಶ್ರೀ ಪ್ರಶಸ್ತಿ’ಯನ್ನು ಮರಣೋತ್ತರವಾಗಿ ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.