ADVERTISEMENT

‘ಆದರ್ಶ ಪುರುಷರು ಸಂವಿಧಾನವನ್ನು ಏಕೆ ಗೌರವಿಸುವುದಿಲ್ಲ’–ಬಿ.ಕೆ. ಹರಿಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 18 ಮೇ 2022, 17:10 IST
Last Updated 18 ಮೇ 2022, 17:10 IST
ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್   

ಬೆಂಗಳೂರು: ಆರ್‌ಎಸ್‌ಎಸ್‌ ನಾಯಕ ಹೆಡಗೇವಾರ್‌ ಮತ್ತು ಅವರನ್ನೇ ಆದರ್ಶವಾಗಿಟ್ಟುಕೊಂಡು ಬೆಳೆದ ‘ಆದರ್ಶ ಪುರುಷರು’ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಏಕೆ ಗೌರವಿಸುವುದಿಲ್ಲ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಪ್ರಶ್ನಿಸಿದ್ದಾರೆ.

ಪಠ್ಯದಲ್ಲಿ ಹೆಡಗೇವಾರ್‌ ಅವರ ಲೇಖನವನ್ನು ಸೇರಿಸಿರುವ ಕುರಿತು ಬುಧವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಹೆಡಗೇವಾರ್‌ ಅವರು ಬೆಳೆಸಿರುವವರು ಮತ್ತು ಅವರನ್ನೇ ಆದರ್ಶ ಎಂದು ಭಾವಿಸಿರುವವರ ನಡೆ ಮತ್ತು ನುಡಿಗಳು ಪ್ರಶ್ನಾತ್ಮಕವಾಗಿವೆ. ಪಠ್ಯದಲ್ಲಿ ಅಳವಡಿಸಿರುವ ಲೇಖನವೂ ದ್ವಂದ್ವದಿಂದ ಕೂಡಿದೆ. ಅದನ್ನು ಎಳೆಯ ಮಕ್ಕಳು ಬಿಡಿಸಬಲ್ಲರೆ’ ಎಂದು ಕೇಳಿದ್ದಾರೆ.

‘ಒಂದು ಕಡೆ ವ್ಯಕ್ತಿಯನ್ನು ಪೂಜಿಸುವುದಾಗಿ ಹೇಳುತ್ತಾರೆ. ಇನ್ನೊಂದು ಕಡೆಯಲ್ಲಿ ಧ್ವಜವನ್ನೇ ಪೂಜಿಸುತ್ತೇವೆ, ಯಾವ ವ್ಯಕ್ತಿಯನ್ನೂ ಪೂಜಿಸುವುದಿಲ್ಲ ಎನ್ನುತ್ತಾರೆ. ಆದರ್ಶವಾಗಿ ಇರಬೇಕಾದವರೇ ಈ ಪರಿಯ ಗೊಂದಲದಲ್ಲಿ ಮುಳುಗಿದ್ದರೆ ಎಳೆಯ ಮಕ್ಕಳ ಪಾಡು ಏನಾಗಬಹುದು? ಆದರ್ಶದ ಹೆಸರಿನಲ್ಲಿ ಸಂಕುಚಿತ ಯೋಚನೆಗಳನ್ನು ಬಿತ್ತಲಾಗಿದೆ’ ಎಂದು ಟೀಕಿಸಿದ್ದಾರೆ.

ADVERTISEMENT

ಜಗತ್ತಿನಲ್ಲಿರುವ ಕೋಟ್ಯಂತರ ಮಂದಿಯ ಮೇಲೆ ‘ಆದರ್ಶ ಪುರುಷ’ರ ನಂಬಿಕೆಯನ್ನು ಹೇರುವುದಕ್ಕೆ ಇವರು ಎಲ್ಲರಿಗಿಂತ ಮಿಗಿಲಾದವರೆ? ಆದರ್ಶದ ಬಗ್ಗೆ ಬೋಧಿಸುವವರು ತಮ್ಮ ಕಾರ್ಯವೈಖರಿ, ದೇಣಿಗೆ ಸಂಗ್ರಹ ಮತ್ತು ಅದರ ಬಳಕೆಯನ್ನು ಏಕೆ ಪಾರದರ್ಶಕವಾಗಿ ಇರಿಸಿಲ್ಲ? ಈ ‘ಆದರ್ಶ ಪುರುಷರು’ ದೇಶದ ಬಹುಸಂಖ್ಯಾತ ಕೆಳವರ್ಗದವರಿಗೆ ನೀಡುತ್ತಿರುವ ಕಿರುಕುಳದ ಕುರಿತು ಏಕೆ ಚಕಾರ ಎತ್ತುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.