
ಗುರುವಾರ ರಾತ್ರಿ ಗುಂಪಿನಲ್ಲಿ ಗುಂಡು ಹಾರಿಸಿದವರ ವಿಡಿಯೊವನ್ನು ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶನ ಮಾಡಿದರು.
ಬ್ಯಾನರ್ ಕಟ್ಟುವ ಸಂಬಂಧ ಆರಂಭವಾದ ಜಗಳ, ಘರ್ಷಣೆ ಹಾಗೂ ಗುಂಡಿನ ಮೊರೆತ ಬೆಳವಣಿಗೆಗೆ ಸಾಕ್ಷಿಯಾದ ಬಳ್ಳಾರಿಯಲ್ಲಿ ಶುಕ್ರವಾರ ಮಾತಿನ ಕಿಡಿಗಳು ಸಿಡಿದವು. ಶಾಸಕರಾದ ಕಾಂಗ್ರೆಸ್‌ನ ಭರತ್ ರೆಡ್ಡಿ ಅವರ ವಿರುದ್ಧ ಬಿಜೆಪಿಯ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದರು
ಶಾಂತಿಗೆ ಭಂಗವಾಗಿದ್ದರೆ ಸಾರ್ವಜನಿಕರ ಕ್ಷಮೆಯಾಚಿಸುವೆ: ಭರತ್ ರೆಡ್ಡಿ
ಬಳ್ಳಾರಿ: ‘ನಗರದಲ್ಲಿ ನನ್ನಿಂದ ಏನಾದರೂ ಶಾಂತಿಗೆ ಭಂಗವಾಗಿದ್ದರೆ ಸಾರ್ವಜನಿಕರ ಕ್ಷಮೆಯಾಚಿಸುವೆ’ ಎಂದು ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು. .
‘ಯಾರಿಂದಲೇ ಘಟನೆ ನಡೆದಿರಲಿ. ತನಿಖೆ ಬಳಿಕ ನಿಜ ಸಂಗತಿ ಬಯಲಾಗಲಿದೆ. ನಿನ್ನೆ ನಡೆದ ಬೆಳವಣಿಗೆಯಲ್ಲಿ ನನ್ನಿಂದ ಜನರಿಗೆ ತೊಂದರೆಯಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಇದೊಂದು ಆಕಸ್ಮಿಕ ಘಟನೆ. ಶಾಸಕನಾಗಿ ನಾನು ಜನರ ಕ್ಷಮೆ ಕೇಳುವೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಸಕ ನಾಗೇಂದ್ರ ಮಾತನಾಡಿ, ‘ಬಳ್ಳಾರಿಯಲ್ಲಿ ಶನಿವಾರ ನಡೆಯಬೇಕಿದ್ದ ಮಹರ್ಷಿ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯಕ್ರಮ ತಾತ್ಕಾಲಿಕ ಮುಂದೂಡುವ ವಿಷಯಕ್ಕೆ ಶಾಸಕ ಭರತ್ ರೆಡ್ಡಿ ಅವರ ಮನವೊಲಿೇತಹ ಮುಖ್ಯಮಂತ್ರಿ ಸೂಚಿಸಿ, ಬಳ್ಳಾರಿಗೆ ನನ್ನನ್ನು ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೂಚನೆಯಂತೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ’ ಎಂದು ತಿಳಿಸಿದರು.
ವರದಿ ನಂತರ ಕ್ರಮ: ಜಿ.ಪರಮೇಶ್ವರ
ತುಮಕೂರು: ‘ಬಳ್ಳಾರಿ ಗಲಭೆಗೆ ಸಂಬಂಧಿಸಿದಂತೆ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸತೀಶ್‌ರೆಡ್ಡಿ ಎಂಬುವರ ಗನ್‌ಮ್ಯಾನ್ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ತನಿಖೆ ನಡೆಯಲಿದೆ. ಗಲಾಟೆ
ಸಂಬಂಧ ಶಾಸಕ ಜನಾರ್ದನ ರೆಡ್ಡಿ ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು
ಮಾಹಿತಿ ನೀಡಿದರು.
‘ವಾಲ್ಮೀಕಿ ಪುತ್ಥಳಿ ಅನಾವರಣ, ಬ್ಯಾನರ್ ಅಳವಡಿಸುವ ವಿಚಾರದಲ್ಲಿ ರಾಜಕೀಯ ಮಾಡಿದ್ದು ಸರಿಯಲ್ಲ. ಇದನ್ನು ನಾವು ಸಹಿಸುವುದಿಲ್ಲ. ಜನಾರ್ದನ ರೆಡ್ಡಿ ಕಡೆಯವರು ಪೋಸ್ಟರ್ ಕಿತ್ತು ದಾಂದಲೆ ಮಾಡಿರುವುದಾಗಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ಈ ಸಮಯದಲ್ಲಿ ಫೈರಿಂಗ್ ನಡೆದಿದೆ. ಈ ಕೃತ್ಯವನ್ನು ಯಾರು ನಡೆಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇನೆ’ ಎಂದರು.
ಆರ್. ಅಶೋಕ
ನ್ಯಾಯಾಂಗ ತನಿಖೆಗೆ ಬಿಜೆಪಿ ಒತ್ತಾಯ
ಬೆಂಗಳೂರು: ಬಳ್ಳಾರಿಯಲ್ಲಿ ಗಲಾಟೆ ಮತ್ತು ಗುಂಡೇಟಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಆಂಧ್ರ ಪ್ರದೇಶ ಸ್ವರೂಪ ರಕ್ತ ಚರಿತ್ರೆ ಆರಂಭವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬೇಕೆಂದಲೇ ಜನಾರ್ದನ ರೆಡ್ಡಿ ಅವರ ಮನೆಯ ಆವರಣದಲ್ಲಿ ಫ್ಲೆಕ್ಸ್‌ಗಳನ್ನು ಹಾಕಿದ್ದಾರೆ. ಈ ಬಗ್ಗೆ ಜನಾರ್ದನ ರೆಡ್ಡಿ ದೂರು ನೀಡಿದ್ದು, ಪೊಲೀಸರು ಬಂದು ಫ್ಲೆಕ್ಸ್ ತೆರವು ಮಾಡಿದ್ದಾರೆ’ ಎಂದರು.
‘ಇದನ್ನೇ ನೆಪ ಮಾಡಿಕೊಂಡು ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರು ಜನಾರ್ದನ ರೆಡ್ಡಿ ಅವರ ಮನೆಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ತಪ್ಪಿತಸ್ಥ ಭರತ್ ರೆಡ್ಡಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲಿಗೆ ಪೊಲೀಸರು, ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಮಾಡಿ, ಶಿಕ್ಷೆ ನೀಡುವ ಸಲುವಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ‘ರಾಜ್ಯದಲ್ಲಿ ಹೊಸ ವರ್ಷವು ರಕ್ತಸಿಕ್ತ ಅಧ್ಯಾಯದೊಂದಿಗೆ ಆರಂಭವಾಗಿದೆ. ಅದಕ್ಕೆ ಕಾರಣರಾದವರ ಪರವಾಗಿ ಸರ್ಕಾರ ನಿಂತಿದೆ. ಶಾಸಕ ಭರತ್ ರೆಡ್ಡಿ ಮತ್ತು ಬೆಂಬಲಿಗರನ್ನು ಬಂಧಿಸುವ ಬದಲಿಗೆ, ಜನಾರ್ದನ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ಭರತ್ ರೆಡ್ಡಿ ಬಂಧಿಸಿ’
‘ಬಳ್ಳಾರಿ ಗಲಾಟೆ ನಡೆಯಲು ಮತ್ತು ಗುಂಡೇಟಿನಿಂದ ವ್ಯಕ್ತಿಯೊಬ್ಬರು ಮೃತಪಡಲು ಶಾಸಕ ಭರತ್ ರೆಡ್ಡಿಯೇ ಕಾರಣ. ಅವರನ್ನು ಕೂಡಲೇ ಬಂಧಿಸಬೇಕು. ಶಾಸಕ ಜನಾರ್ದನ ರೆಡ್ಡಿ ಅವರನ್ನು ಕೊಲ್ಲುವ ಉದ್ದೇಶದಿಂದಲೇ ಭರತ್ ರೆಡ್ಡಿ ಅವರು ಸಂಚು ರೂಪಿಸಿದ್ದಾರೆ. ಸಂಚಿನ ಭಾಗವಾಗಿ ಗಲಾಟೆ ಆರಂಭಿಸಿ, ತಮ್ಮ ಗನ್‌ಮ್ಯಾನ್ ಮೂಲಕ ಗುಂಡು ಹಾರಿಸಿದ್ದಾರೆ. ಭರತ್ ರೆಡ್ಡಿ ಅವರನ್ನು ಕೂಡಲೇ ಬಂಧಿಸಿ’ ಎಂದು ಆರ್.ಅಶೋಕ ಅವರು ಪೊಲೀಸ್ ಮಹಾನಿರ್ದೇಶಕ ಎಂ.ಎ.ಸಲೀಂ ಅವರಿಗೆ ಮನವಿ ಸಲ್ಲಿಸಿದ್ದಾರೆ.
‘ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಜೀವಕ್ಕೆ ಅಪಾಯವಿದೆ. ಅವರಿಗೆ ಭದ್ರತೆ ಒದಗಿಸಬೇಕು. ಈ ಗಲಾಟೆಗೆ ಕಾರಣವಾಗಿರುವ ಭರತ್‌ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿದ್ದಾರೆ.
ದಂಧೆಯಲ್ಲಿ ತೊಡಗಿರುವ ಶಾಸಕ: ಜನಾರ್ದನ ರೆಡ್ಡಿ
ಬಳ್ಳಾರಿ: ‘ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸ್ವತಃ ದಂಧೆಯಲ್ಲಿ ತೊಡಗಿದ್ದಾನೆ. ಹೀಗಾಗಿ ಕಾಂಗ್ರೆಸ್ ಪಕ್ಷ ಇಲ್ಲಿ ಜನರ ಪ್ರೀತಿ ಕಳೆದುಕೊಂಡಿದೆ. ಅದನ್ನು ಮರೆ ಮಾಚಲು ಇಷ್ಟೆಲ್ಲ ಮಾಡಲಾಗಿದೆ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭರತ್ ರೆಡ್ಡಿ ಮಟ್ಕಾ ದಂಧೆ ನಡೆಸುತ್ತಿದ್ದಾನೆ. ಲಂಚ, ಮರಳು ಅಕ್ರಮ, ವರ್ಗಾವಣೆ ದಂಧೆ ಜಿಲ್ಲೆಯಲ್ಲಿ ಹೆಚ್ಚಾಗಿದೆ’ ಎಂದು ನೇರವಾಗ್ದಾಳಿ ನಡೆಸಿದರು.
‘ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಜನರ ಪ್ರೀತಿ ಕಳೆದುಕೊಳ್ಳುತ್ತಿದೆ. ಹೀಗಾಗಿ, ಬ್ಯಾನರ್ ವಿಚಾರ ಇಟ್ಟುಕೊಂಡು ಇಷ್ಟು ದೊಡ್ಡಮಟ್ಟದ ಗಲಾಟೆ ನಡೆಸಲಾಗಿದೆ’ ಎಂದು ಏಕವಚನದಲ್ಲಿ ಹರಿಹಾಯ್ದರು.
‘ಜೀವ ರಕ್ಷಣೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಪೊಲೀಸರಿಗೆ ದೂರು ದಾಖಲಿಸಲು ನಿರ್ಧರಿಸಲಾಗಿದೆ’ ಎಂದು ಅವರು ತಿಳಿಸಿದರು.
ಯಾರು ಏನೆಂದರು?...
ಅವನು (ಜನಾರ್ದನ ರೆಡ್ಡಿ) ನೀಚ, ರಾಕ್ಷಸ. ಜೀವನದಲ್ಲಿ ನಿಜ ಹೇಳಿದವನಲ್ಲ. ಅದಕ್ಕಾಗಿಯೇ ಬೀದಿಗೆ ಬಂದು ಇಷ್ಟು ಗಲಾಟೆ ಮಾಡಿದ್ದಾನೆ. ಅವನಿಗೆ ಅಂತ್ಯ ಹಾಡಿಯೇ ಹಾಡುತ್ತೇವೆ. ಅವನಿಗೆ ಶಿಕ್ಷೆ ಆಗುವುದು ನಿಜನಾರಾ ಭರತ್ ರೆಡ್ಡಿ, ಶಾಸಕ
ಜನಾರ್ದನ ರೆಡ್ಡಿ ಮನೆಯನ್ನು ನುಚ್ಚುನೂರು, ಪುಡಿ ಪುಡಿ, ಭಸ್ಮ ಮಾಡುತ್ತೇನೆ, ಮುಗಿಸಿ ಬಿಡುತ್ತೇನೆ ಎನ್ನುವ ಧಾಟಿಯಲ್ಲಿ ಶಾಸಕ ಭರತ್ ರೆಡ್ಡಿ ಮಾತನಾಡಿದ್ದಾರೆ. ಇದು ಪ್ರಚೋದನೆಯಲ್ಲದೆ ಮತ್ತಿನ್ನೇನು? ದ್ವೇಷ ಭಾಷಣ ಮಸೂದೆ ಜಾರಿಗೆ ತರಲು ಹೊರಟಿರುವ ಮುಖ್ಯಮಂತ್ರಿ, ಗೃಹ ಸಚಿವರು ತಮ್ಮ ಪಕ್ಷದ ಶಾಸಕರ ಮಾತುಗಳನ್ನು ಆಲಿಸಿದಲ್ಲಿ ದ್ವೇಷ ಭಾಷಣ ಕಾಯ್ದೆಯ ಮೊದಲ ಅಪರಾಧಿಯೇ ತಮ್ಮ ಪಕ್ಷದ ಶಾಸಕರಾಗುತ್ತಾರೆ.- ಬಿ.ವೈ ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ
‘ನಮ್ಮ ಸಿಬ್ಬಂದಿ ಬಂದೂಕು ಪ್ರಯೋಗಿಸಿಲ್ಲ. ಮೃತನ ದೇಹದಲ್ಲಿ ಸಿಕ್ಕ ಗುಂಡು ಮತ್ತು ವಶಕ್ಕೆ ಪಡೆದಿರುವ ಬಂದೂಕುಗಳನ್ನು ಹೋಲಿಕೆ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆಹಿತೇಂದ್ರ ಆರ್. , ಎಡಿಜಿಪಿ