ADVERTISEMENT

ಬಳ್ಳಾರಿ ಘರ್ಷಣೆ, ಗುಂಡೇಟು ಪ್ರಕರಣ: 2ನೇ ಶವ ಪರೀಕ್ಷೆಯಲ್ಲಿ ವ್ಯಾಡ್‌ ಪತ್ತೆ

ಮರು ಶವಪರೀಕ್ಷೆಗೆ ಶಾಸಕ ಭರತ್‌ ರೆಡ್ಡಿ ಸಂಬಂಧಿಗಳ ಒತ್ತಡಕ್ಕೆ ಮಣಿದಿದ್ದ ಪೊಲೀಸರು?

ಆರ್. ಹರಿಶಂಕರ್
Published 6 ಜನವರಿ 2026, 4:08 IST
Last Updated 6 ಜನವರಿ 2026, 4:08 IST
ಸಾಕ್ಷ್ಯ ಸಂಗ್ರಹದ ಪ್ರಕ್ರಿಯೆ ನಡೆಸುತ್ತಿರುವ ಬಾಂಬ್‌ ನಿಷ್ಕ್ರಿಯ ತಂಡ 
ಸಾಕ್ಷ್ಯ ಸಂಗ್ರಹದ ಪ್ರಕ್ರಿಯೆ ನಡೆಸುತ್ತಿರುವ ಬಾಂಬ್‌ ನಿಷ್ಕ್ರಿಯ ತಂಡ    

ಬಳ್ಳಾರಿ: ‘ಖಾಸಗಿ ಅಂಗರಕ್ಷಕರ ಬಂದೂಕಿನಿಂದ ಸಿಡಿದು ಮೃತಪಟ್ಟಿದ್ದ ಕಾಂಗ್ರೆಸ್‌ ಕಾರ್ಯಕರ್ತ ರಾಜಶೇಖರ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ಎರಡು ಬಾರಿ ನಡೆದಿದ್ದು, ಎರಡನೇ ಎರಡನೇ ಮರಣೋತ್ತರ ಪರೀಕ್ಷೆಯಲ್ಲಿ ‘ವ್ಯಾಡ್‌’ ಪತ್ತೆಯಾಗಿದೆ ಎಂದು ನಿಕಟ ಮೂಲಗಳು ತಿಳಿಸಿವೆ.

ಸಂಬಂಧಿಕರ ಒತ್ತಾಯದ ಮೇರೆಗೆ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆದಿತ್ತು. ಮರಣೋತ್ತರ ಪರೀಕ್ಷೆ ವೇಳೆ ರಾಜಶೇಖರ ಒಡಲಲ್ಲಿ ‘ವ್ಯಾಡ್‌’ ಎಂಬ ವಸ್ತು ಪತ್ತೆಯಾಗಿತ್ತು ಎಂದು ಪ್ರಜಾವಾಣಿಯ ಜ. 3ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ರಾಜಕೀಯ ಮುಖಂಡರೂ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದು, ಎರಡನೇ ಬಾರಿ ಪರೀಕ್ಷೆ ವೇಥಾ ಬುಲೆಟ್‌ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಎರಡೆರಡು ಬಾರಿ ಏಕೆ?: 

ADVERTISEMENT

ಜನವರಿ 2ರ ಬೆಳಿಗ್ಗೆ 7ಕ್ಕೆ ಮರಣೋತ್ತರ ಪರೀಕ್ಷೆ ನಡೆಸಿದಾಗ, 9 ರಿಂದ 10 ಪೆಲೆಟ್‌ಗಳು (ಕಬ್ಬಿಣದ ಸಣ್ಣ ಗುಂಡು) ಪತ್ತೆಯಾಗಿದ್ದವು. 9 ಗಂಟೆ ಹೊತ್ತಿಗೆ ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ಮತ್ತು ಅವರ ಹತ್ತಿರದ ಸಂಬಂಧಿಯೊಬ್ಬರು ವಿಮ್ಸ್‌ಗೆ ಬಂದಿದ್ದು, ಮರಣೋತ್ತರ ಪರೀಕ್ಷೆಯನ್ನು ತಮ್ಮ ಸಮ್ಮುಖದಲ್ಲೇ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು ಎನ್ನಲಾಗಿದೆ. 

ಇದೇ ವೇಳೆಗೆ ಸೋಕೊ (ಸೀನ್‌ ಆಫ್‌ ಕ್ರೈಂ ಆಫೀಸರ್ಸ್‌) ತಂಡದ ಸದಸ್ಯರು ಇದ್ದರು. ರಾಜಶೇಖರ ಅವರ ದೇಹದ ‘ಎಕ್ಸ್‌ ರೇ’ಯನ್ನು ಲಘು ಬಗೆಯಲ್ಲಿ ಪರಿಶೀಲಿಸುತ್ತಿದ್ದ ಅಧಿಕಾರಿಗಳು ಅನ್ಯ ವಸ್ತು‌ ಬೆನ್ನಿನ ಮೂಳೆಗಳಲ್ಲಿ ಸಿಲುಕಿರುವ ಶಂಕೆ ವ್ಯಕ್ತಪಡಿಸಿ ವೈದ್ಯರಿಗೆ ತಿಳಿಸಿದ್ದರು. ಆಗ ವ್ಯಾಡ್‌ ಪತ್ತೆಯಾಗಿದ್ದು, ಪ್ರಕರಣಕ್ಕೆ ತಿರುವು ನೀಡಿತು ಎಂದು ಬಲ್ಲ ಮೂಲಗಳು ಹೇಳಿವೆ. 

ಮೃತ ರಾಜಶೇಖರ ಕೊಲೆ ಆರೋಪಿ: ಮೃತ ರಾಜಶೇಖರ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಜೈಲಿಗೆ ಹೋಗಿ  ಬಂದಿದ್ದರು. ಪ್ರಕರಣವೊಂದರಲ್ಲಿ ರಾಜಶೇಖರ (ಎ6) ಸೇರಿ 12 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಮಾರ್ಚ್‌ 6ರಂದು ರಾಜಶೇಖರನನ್ನು ಬಂಧಿಸಲಾಗಿತ್ತು.   

ಶಾಸಕರ ಕಚೇರಿಯಿಂದ ವಿಡಿಯೊ ಬಿಡುಗಡೆ:

ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಆವರಣದಲ್ಲಿ ರಾಶಿ ದೊಣ್ಣೆಗಳು ಇರುವ ದೃಶ್ಯದ ವಿಡಿಯೊವನ್ನು ನಗರ ಶಾಸಕ ಭರತ್‌ ರೆಡ್ಡಿ ಅವರ ಕಚೇರಿಯಿಂದ ಸೋಮವಾರ ಬಿಡುಗಡೆ ಮಾಡಲಾಯಿತು. ಇದು ಗಲಭೆಗೆ ಬಳಸಲು ತಂದಿರುವುದಾಗಿ ಆರೋಪಿಸಲಾಯಿತು.

ಈ ಕುರಿತು ಮಾತನಾಡಿದ ಬಿ.ಶ್ರೀರಾಮುಲು ‘ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಂದ ನಮ್ಮವರು ಕಟ್ಟಿಗೆ ಕಿತ್ತುಕೊಂಡಿರಬಹುದು, ನಮ್ಮವರೂ ತಂದಿರಬಹುದು. ತಪ್ಪಿದ್ದರೆ ಪೊಲೀಸರು ಕ್ರಮ ಕೈಗೊಳ್ಳಲಿ’ ಎಂದಿದ್ದಾರೆ. 

ಘಟನಾ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ:

ದೊಂಬಿ ನಡೆದ ಸಿರುಗುಪ್ಪ ರಸ್ತೆಯ ಅವ್ವಂಬಾವಿಯ ಜನಾರ್ದನ ರೆಡ್ಡಿ ನಿವಾಸದ ಬಳಿ ಸೋಮವಾರ ತೆರಳಿದ ಬಾಂಬ್‌ ನಿಷ್ಕ್ರಿಯ ದಳ ಮತ್ತು ವಿಧಿ ವಿಜ್ಞಾನ ತಜ್ಞರು ಎನ್‌ಎಲ್‌ಜೆಡಿ (ನಾನ್‌ ಲೀನಿಯರ್‌ ಜಂಕ್ಷನ್‌ ಡಿಟೆಕ್ಟರ್‌) ತಂತ್ರಜ್ಞಾನ ಬಳಸಿ ಗುಂಡುಗಳ ಕೇಸ್‌ ಪತ್ತೆಯಾಗಿದೆ.   

ಸಾಕ್ಷ್ಯ ಸಂಗ್ರಹದ ಭಾಗವಾಗಿ ನಡೆದ ಈ ಪ್ರಕ್ರಿಯೆಯಲ್ಲಿ ಒಂದು ಗುಂಡಿನ ಕೇಸ್‌ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಆದರೆ, ಇಷ್ಟೇ ಸಂಖ್ಯೆಯ ಕೇಸ್‌ಗಳು ಸಿಕ್ಕಿವೆ ಎಂದು ಹೇಳಲು ಸಾಧ್ಯವಿಲ್ಲ ಪೊಲೀಸ್‌ ಇಲಾಖೆ ಹೇಳಿದೆ. ವಿಧಿ ವಿಜ್ಞಾನ ತಂಡದ ತಜ್ಞರೂ ಘಟನಾ ಸ್ಥಳ ಮತ್ತು ಪತ್ತೆಯಾದ ವಸ್ತುಗಳ ಪರಿಶೀಲನೆ ನಡೆಸಿದರು. 

ವಿಮ್ಸ್‌ನ ಶವಾಗಾರದ ಎದುರು ಬಳ್ಳಾರಿ ಹೆಚ್ಚುವರಿ ಎಸ್‌ಪಿ ರವಿಕುಮಾರ್‌ ಅವರೊಂದಿಗೆ ಚರ್ಚೆ ನಡೆಸುತ್ತಿರುವ ಶಾಸಕ ನಾರಾ ಭರತ್‌ ರೆಡ್ಡಿ ಮತ್ತು ಚಿಕ್ಕಪ್ಪ ಪ್ರತಾಪ್‌ ರೆಡ್ಡಿ 
ಗುಂಡೇಟು ತಗುಲಿ ಸಾವಿಗೀಡಾಗುವುದಕ್ಕೂ ಮೊದಲು ಘರ್ಷಣೆಯಲ್ಲಿ ಭಾಗಿಯಾಗಿರುವ ರಾಜಶೇಖರ 
ನಗರದ ವಾಲ್ಮೀಕಿ ವೃತ್ತದಲ್ಲಿ ಭದ್ರತೆ ಮುಂದುವರಿದಿರುವುದು 
ಬಳ್ಳಾರಿ ನಗರದ ಸಿರುಗುಪ್ಪ ರಸ್ತೆಯ ಅವ್ವಂಬಾವಿಯ ಘಟನಾ ಸ್ಥಳದಲ್ಲಿ ಸೋಮವಾರ  ರಿಶೀಲನೆ ನಡೆಸುತ್ತಿರುವ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ 
ಮರಣೋತ್ತರ ಪರೀಕ್ಷೆ ಎರಡು ಬಾರಿ ನಡೆಸುವ ಅಗತ್ಯವೇನಿತ್ತು. ಭರತ್‌ ರೆಡ್ಡಿ ಅವರ ತಂದೆ ಕ್ರಿಮಿನಲ್‌. ಅವರ ಆದೇಶದ ಮೇರೆಗೆ ಹೀಗೆ ಮಾಡಲಾಗಿದೆ. ಘಟನೆಯ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ತನಿಖೆ ಮಾಹಿತಿ ಸರ್ಕಾರ ಹಂಚಿಕೊಳ್ಳಬೇಕು
ಜನಾರ್ದನ ರೆಡ್ಡಿ ಶಾಸಕ
ಮರಣೋತ್ತರ ಪರೀಕ್ಷೆ ಮೂರು–ನಾಲ್ಕು ಬಾರಿ ನಡೆದಿದೆ. ಗುಂಡು ಮೊದಲ ಬಾರಿಗೆ ಸಿಕ್ಕಿಲ್ಲ. ಹಿರಿಯ ಅಧಿಕಾರಿಗಳು ಸೇರಿ ಮತ್ತೆ ಪರೀಕ್ಷೆ ನಡೆಸಿದಾಗ ಗುಂಡು ಸಿಕ್ಕಿದೆ. ಗುಂಡು ಹೊರಗೆ ತೆಗೆಯದೇ ಜನಾರ್ದನ ರೆಡ್ಡಿ ಅವರನ್ನು ಸಿಲುಕಿಸಲು ಪ್ರಯತ್ನಿಸಲಾಗಿತ್ತು.
ಬಿ. ಶ್ರೀರಾಮುಲು ಮಾಜಿ ಸಚಿವ
ಬಳ್ಳಾರಿ ದೊಂಬಿಯಲ್ಲಿ ಪ್ರಭಾವಿಗಳ ಪಾತ್ರವಿದೆ. ಖ್ಯಾತನಾಮರನ್ನು ಬಂಧಿಸಿದರೆ ಕಾನೂನು ಮತ್ತು ಸುವ್ಯವಸ್ಥೆ ಪ್ರಶ್ನೆ ಎದುರಾಗುತ್ತದೆ. ಈ ಕಾರಣಕ್ಕೆ ಅಂಥವರನ್ನು ಬಂಧಿಸಿಲ್ಲ.
ಹಿರಿಯ ಪೊಲೀಸ್ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.