ADVERTISEMENT

ರಾಜ್ಯದಲ್ಲಿ ‌370 ಬಾಂಗ್ಲಾ ಪ್ರಜೆಗಳು ಪತ್ತೆ: ಜಿ. ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 16:19 IST
Last Updated 2 ಫೆಬ್ರುವರಿ 2026, 16:19 IST
<div class="paragraphs"><p>ಜಿ. ಪರಮೇಶ್ವರ</p></div>

ಜಿ. ಪರಮೇಶ್ವರ

   

ಬೆಂಗಳೂರು: ‘ರಾಜ್ಯದಲ್ಲಿ ಒಟ್ಟು 370 ಬಾಂಗ್ಲಾ ಪ್ರಜೆಗಳನ್ನು ಗುರುತಿಸಲಾಗಿದೆ. ಈ ಪೈಕಿ, 196 ಜನರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಮಾಹಿತಿ ನೀಡಿದರು.

ಕಾನೂನು ಸುವ್ಯವಸ್ಥೆ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಆಕ್ಷೇಪಗಳಿಗೆ ಉತ್ತರಿಸಿದ ಅವರು, ‘ಕೇವಲ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದಲ್ಲಿ ಬಾಂಗ್ಲಾದೇಶದವರು ನೆಲಸಿದ್ದಾರೆ. ಅವರು ಸಾಮಾನ್ಯವಾಗಿ ಕೊಲ್ಕತ್ತಾ ಮೂಲಕ ದೇಶದ ಒಳಗೆ ಬರುತ್ತಾರೆ. ಗಡಿಯಲ್ಲಿ ಅವರನ್ನು ತಡೆಯುವ ಜವಾಬ್ದಾರಿ ಗಡಿಯಲ್ಲಿರುವ ಸೈನಿಕರ ಮೇಲಿರುತ್ತದೆ. ಆದರೂ ಒಳನುಸುಳಿ, ಕೆಲಸ ಅರಸಿ ಕರ್ನಾಟಕ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳಿಗೆ ವಲಸೆ ಬರುತ್ತಾರೆ’ ಎಂದು ವಿವರಿಸಿದರು.

ADVERTISEMENT

‘ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಂಗ್ಲಾದೇಶದವರು ನೆಲಸಿದ್ದಾರೆ’ ಎಂಬ ಆರೋಪವನ್ನು ತಳ್ಳಿಹಾಕಿದ ಸಚಿವರು, ‘ಇಷ್ಟು ದೊಡ್ಡ ಸಂಖ್ಯೆಯಲ್ಲಿ ಅವರು ಇಲ್ಲಿರುವುದನ್ನು ನಾನು ಒಪ್ಪುವುದಿಲ್ಲ. ಈ ಬಗ್ಗೆ ನಿಗಾ ವಹಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

‘ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೇ ಅತಿ ಹೆಚ್ಚು, 284 ಮಂದಿ ಬಾಂಗ್ಲಾ ಪ್ರಜೆಗಳು ನೆಲಸಿದ್ದಾರೆ. ಉಳಿದಂತೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 37, ಶಿವಮೊಗ್ಗದಲ್ಲಿ 12 ಹಾಗೂ ಹಾಸನದಲ್ಲಿ 3 ಜನ ಬಾಂಗ್ಲಾದೇಶದವರು ಇರುವುದನ್ನು ಗುರುತಿಸಲಾಗಿದೆ’ ಎಂದರು.

‘ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದಕ್ಕಾಗಿ ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿದೆ. ರಾಜ್ಯ ಸರ್ಕಾರವು ಅಕ್ರಮ ವಲಸಿಗರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದರೆ, ಕೇಂದ್ರ ಸರ್ಕಾರ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆಯನ್ನು ನಡೆಸುತ್ತಿದೆ’ ಎಂದರು.

ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ್, ‘ಪುನೀತ್ ಕೆರೆಹಳ್ಳಿ ಹೋದಾಗ ನಾವು ಬಾಂಗ್ಲಾದಿಂದ ಬಂದವರು ಎಂದು ಕೆಲವರು ಒಪ್ಪಿಕೊಂಡಿದ್ದಾರೆ. ಅವರಲ್ಲಿ ಎಷ್ಟು ಜನರನ್ನು ಹಿಡಿದು ವಾಪಸ್ ಕಳುಹಿಸಿದ್ದೀರಿ. ಇದಕ್ಕೆ ರಾಜ್ಯ ಸರ್ಕಾರ ಉತ್ತರ ಕೊಡಬೇಕಲ್ಲವೇ? ಪುನೀತ್ ಮೇಲೆಯೇ ಕೇಸ್ ಹಾಕಿದಿರಿ’ ಎಂದರು.

ಆಗ ಪರಮೇಶ್ವರ, ‘ಪುನೀತ್ ಕೆರೆಹಳ್ಳಿಗೆ ಅಧಿಕಾರ ಕೊಟ್ಟವರು ಯಾರು? ಅವರು ನಮಗೆ ಹೇಳಿದರೆ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನು ಕೈಗೆ ತೆಗೆದುಕೊಳ್ಳಲು ಸಾಧ್ಯವೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.