ADVERTISEMENT

ಬಾನು ಮುಷ್ತಾಕ್‌ ಅವರ ‘ಹಸೀನಾ ಮತ್ತು ಇತರ ಕಥೆಗಳು’ ಕೃತಿಗೆ ಹೆಚ್ಚಿದ ಬೇಡಿಕೆ

ಪುಸ್ತಕ ಮಳಿಗೆಗಳಲ್ಲಿ ಖಾಲಿ, ಹೊಸದಾಗಿ ‘ಆರ್ಡರ್‌’

ಎಂ.ಮಹೇಶ
Published 23 ಮೇ 2025, 23:31 IST
Last Updated 23 ಮೇ 2025, 23:31 IST
‘ಹಸೀನಾ ಮತ್ತು ಇತರ ಕಥೆಗಳು’ ಕೃತಿಯೊಂದಿಗೆ ಲೇಖಕಿ ಬಾನು ಮುಷ್ತಾಕ್‌
‘ಹಸೀನಾ ಮತ್ತು ಇತರ ಕಥೆಗಳು’ ಕೃತಿಯೊಂದಿಗೆ ಲೇಖಕಿ ಬಾನು ಮುಷ್ತಾಕ್‌   

ಮೈಸೂರು: ಪ್ರತಿಷ್ಠಿತ ‘ಅಂತರರಾಷ್ಟ್ರೀಯ ಬೂಕರ್‌ ಪ್ರಶಸ್ತಿ’ಗೆ ಪಾತ್ರವಾದ ‘ಹಾರ್ಟ್‌ ಲ್ಯಾಂಪ್‌’ನ ಮೂಲ ಕೃತಿಯಾದ ‘ಎದೆಯ ಹಣತೆ’ ಕಥೆಯನ್ನು ಒಳಗೊಂಡಿರುವ ‘ಹಸೀನಾ ಮತ್ತು ಇತರ ಕಥೆಗಳು’ ಕೃತಿಗೆ ಬೇಡಿಕೆ ಹೆಚ್ಚಾಗಿದೆ.

ಕಥೆಗಾರ್ತಿ ಬಾನು ಮುಷ್ತಾಕ್‌ ಅವರ ಸಣ್ಣ ಕಥೆಗಳ ಸಂಕಲನವನ್ನು ಮೈಸೂರಿನ ‘ಅಭಿರುಚಿ ಪ್ರಕಾಶನ’ ಪ್ರಕಟಿಸಿದೆ. ಇಂಗ್ಲಿಷ್‌ ಅನುವಾದವಾದ ‘ಹಾರ್ಟ್‌ಲ್ಯಾಂಪ್‌’ ಕೃತಿಯು ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಬಳಿಕ, ಇದಕ್ಕೆ ಓದುಗರಿಂದ ಬೇಡಿಕೆ ಬರುತ್ತಿದೆ. ಕಾರಣ, ಬುಕ್‌ಹೌಸ್‌ಗಳಿಂದ ಅಭಿರುಚಿ ಪ್ರಕಾಶನಕ್ಕೆ ಆರ್ಡರ್‌ ಹೆಚ್ಚಾಗಿದೆ. ಪ್ರಶಸ್ತಿ ಘೋಷಣೆಯಾದ ನಂತರವಂತೂ, ಆ ಕೃತಿಯನ್ನು ಓದಲು ಸಾಹಿತ್ಯಾಸಕ್ತರಲ್ಲಿ ಕುತೂಹಲ ಜಾಸ್ತಿಯಾಗಿದೆ.

ಲಂಡನ್‌ನ ಟೇಟ್‌ ಮಾಡರ್ನ್‌ನಲ್ಲಿ ಪ್ರಶಸ್ತಿ ಘೋಷಣೆಯಾದ ದಿನವಾದ ಬುಧವಾರ ಬರೋಬ್ಬರಿ 450 ಪುಸ್ತಕಗಳು ಮಾರಾಟವಾಗಿವೆ. ಗುರುವಾರ ಮತ್ತೆ 300 ಪ್ರತಿಗಳಿಗೆ ಆರ್ಡರ್‌ ಬಂದಿದೆ. ಪ್ರಕಾಶಕರು ಮುದ್ರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ADVERTISEMENT

776 ಪುಟಗಳ ಈ ಕೃತಿ 2013ರಲ್ಲಿ ಮೊದಲ ಮುದ್ರಣ ಕಂಡಿತ್ತು. ಪ್ರಶಸ್ತಿಗೆ ನಾಮನಿರ್ದೇಶನಗೊಂಡು ಘೋಷಣೆವರೆಗೆ 300 ಪ್ರತಿಗಳು ಮಾರಾಟವಾಗಿದ್ದವು. ಈ ಸಮಗ್ರ ಕೃತಿಯು ಇತ್ತೀಚೆಗೆ 2ನೇ ಮುದ್ರಣ ಕಂಡಿತ್ತು. ಮೈಸೂರಿನಲ್ಲೇ ಬಿಡುಗಡೆ ಕಾರ್ಯಕ್ರಮವೂ ನಡೆದಿತ್ತು. ಬಾನು ಮುಷ್ತಾಕ್‌ ಕೂಡ ಪಾಲ್ಗೊಂಡಿದ್ದರು. ‘ಕನ್ನಡತಿಗೆ ಪ್ರತಿಷ್ಠಿತ ಬೂಕರ್ ದೊರೆಯಲೆಂದು ಎಲ್ಲರೂ ಪ್ರಾರ್ಥಿಸಿ’ ಎಂದು ಕೋರಿದ್ದರು’ ಎಂದು ಅಭಿರುಚಿ ಪ್ರಕಾಶನದ ಗಣೇಶ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಓದುಗರಿಂದ ಹೆಚ್ಚಿನ ವಿಚಾರಣೆ ಬರುತ್ತಿರುವುದರಿಂದ, ರಾಜ್ಯದ ಪ್ರಮುಖ ಪುಸ್ತಕ ಮಾರಾಟ ಮಳಿಗೆಗಳಾದ ನವಕರ್ನಾಟಕ, ಸಪ್ನ, ಅಂಕಿತ, ಕದಂಬ, ಆಕೃತಿ, ಬೀಟಲ್‌ಬುಕ್‌ಶಾಪ್‌, ವೀರಲೋಕ ಮೊದಲಾದ ಬುಕ್‌ಹೌಸ್‌ಗಳು ಆರ್ಡರ್‌ ಕೊಡುತ್ತಿವೆ’ ಎಂದು ಮಾಹಿತಿ ನೀಡಿದರು.

‘‘ಹಸೀನಾ ಮತ್ತು ಇತರ ಕಥೆಗಳು’ ಕೃತಿಗೆ ಬೇಡಿಕೆ ಹೆಚ್ಚಾಗಿದೆ. ಬೆಲೆ ₹ 750 ಇದ್ದು, ಬಹಳಷ್ಟು ವಿಚಾರಣೆಗಳು ಬರುತ್ತಿವೆ. ನಮ್ಮಲ್ಲಿದ್ದ ಪ್ರತಿಗಳೆಲ್ಲವೂ ಖಾಲಿಯಾಗಿವೆ. ಸಾಕಷ್ಟು ಓದುಗರು ಬಂದು ಕೃತಿಗಾಗಿ ವಿಚಾರಿಸುತ್ತಿದ್ದಾರೆ. ಗುರುವಾರ ನಮ್ಮಲ್ಲಿ ಪುಸ್ತಕಗಳು ಲಭ್ಯವಿರಲಿಲ್ಲ. ಬೇಡಿಕೆಗೆ ತಕ್ಕಂತೆ ಪ್ರಕಾಶಕರಿಂದ ಪೂರೈಕೆ ಆಗುತ್ತಿಲ್ಲ. ಬೂಕರ್ ಪ್ರಶಸ್ತಿ ಬಂದ ನಂತರವಂತೂ ಖರೀದಿಸಲು ಹೆಚ್ಚಿನವರು ಬರುತ್ತಿದ್ದಾರೆ’ ಎಂದು ನವಕರ್ನಾಟಕ ಪ್ರಕಾಶನದ ಮೈಸೂರು ಮಳಿಗೆ ವ್ಯವಸ್ಥಾಪಕ ಎನ್‌.ಕೆ.ಸತ್ಯನಾರಾಯಣ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.